ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥಕ್ಕೆ ಅಪಮಾನ ಮಾಡಿರುವ ಹಿನ್ನೆಲೆಯಲ್ಲಿʼರಾಮನ ಅವತಾರ’ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರಿಗೆ ಹಿಂದು ಜನಜಾಗೃತಿ ಸಮಿತಿಯ ಶರತ್ ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ ಎಂಬ ಕನ್ನಡ ಚಲನಚಿತ್ರ ಮೇ 10 ಕ್ಕೆ ಬಿಡುಗಡೆಗೊಳ್ಳಲಿದ್ದು, ಅದರ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕೋಟ್ಯಂತರ ಹಿಂದುಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಲಾಗಿದೆ. ಆದ್ದರಿಂದ ಸಿನಿಮಾದ ಹೆಸರನ್ನು ಬದಲಾಯಿಸಬೇಕು ಮತ್ತು ಅದರಲ್ಲಿನ ರಾಮಾಯಣದ ಅಪಮಾನಾತ್ಮಕ ಸನ್ನಿವೇಶಗಳನ್ನು ತೆಗೆದುಹಾಕಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಚಿತ್ರನಟ ‘ರಾಮನ’ ಹೆಸರಿನಲ್ಲಿ ಚುನಾವಣೆಗೆ ನಿಂತಿರುತ್ತಾನೆ, ಅಲ್ಲಿ ‘ಯಾರ ಮನೆ ಮುಂದೆ ಕಸ ಇದ್ದರೆ ರಾಮನಿಗೆ ಕಾಲ್ ಮಾಡಿ’ ಎಂದು ಕರೆ ನೀಡಲಾಗುತ್ತದೆ. ಇನ್ನು ಚಿತ್ರ ನಾಯಕಿ ರಾಮಾಯಣದಂತೆ ರಾಮನನನ್ನು ಜಿಂಕೆಯ ಚಿತ್ರವಿರುವ ಕಾರಿನ ಹಿಂದೆ ಓಡಿಸಿ ನಂತರ ಅವಳನ್ನು ಕಿಡ್ನ್ಯಾಪ್ ಮಾಡುತ್ತಿರುವಂತೆ ತೋರಿಸಲಾಗಿದೆ. ಅಷ್ಟೇ ಅಲ್ಲದೆ ರಾಮನ ವೇಷದಲ್ಲಿ ಚಿತ್ರದ ನಾಯಕ ಖಳನಾಯಕರೊಂದಿಗೆ ಫೈಟಿಂಗ್ ಮಾಡುತ್ತಿರುವಂತೆ ತೋರಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ, ಹಿಂದು ಜನಜಾಗೃತಿ ಸಮಿತಿಯ ಶರತ್ ಕುಮಾರ್, ಭಾರತ ಸೇರಿ ವಿಶ್ವಾದ್ಯಂತ ಪ್ರಭು ಶ್ರೀರಾಮನನ್ನು ಪೂಜಿಸಲಾಗುತ್ತಿದೆ. ರಾಮನಿಗಾಗಿ ಸಾವಿರಾರು ಹಿಂದುಗಳು ತಮ್ಮ ಪ್ರಾಣತ್ಯಾಗ ಮಾಡಿ ಭವ್ಯ ರಾಮಮಂದಿರ ಕಟ್ಟಿದ್ದಾರೆ. ಹೀಗಿರುವಾಗ ಈ ಚಿತ್ರದಲ್ಲಿ ಶ್ರೀರಾಮನ ವೇಷವನ್ನು ನಾಯಕನಿಗೆ ತೊಡಿಸಿ, ಪೊಲೀಸರು ಶ್ರೀರಾಮನನ್ನು ಅಟ್ಟಾಡಿಸುವಂತೆ ತೋರಿಸಲಾಗಿದೆ. ಕಾಮಿಡಿ ಚಿತ್ರ ಮಾಡುವ ಗೀಳಿನಲ್ಲಿ ಪವಿತ್ರ ರಾಮಾಯಣ ಮತ್ತು ಪ್ರಭು ಶ್ರೀರಾಮನ ಘೋರ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.