ಟ್ರಿನಿಡಾಡ್ (ವೆಸ್ಟ್ ಇಂಡೀಸ್): ಭಾರತ ತಂಡದ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಇಲ್ಲಿನ ಫೋರ್ಟ್ ಆಫ್ ಸ್ಪೇನ್ ಕ್ವೀನ್ಸ್ ಪಾರ್ಕ್ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟಿ20 ಮಾದರಿಯ ರೀತಿ ಬ್ಯಾಟ್ ಬೀಸಿ ಕೇವಲ 34 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದರು. ತಮ್ಮ ಬ್ಯಾಟಿಂಗ್ ಯಶಸ್ಸಿಗೆ ನಾಯಕ ರೋಹಿತ್ ಶರ್ಮಾ ನೀಡಿದ ಸಲಹೆಯೇ ಕಾರಣ ಎಂದು ಇಶಾನ್ ಕಿಶನ್ ಹೇಳಿಕೊಂಡಿದ್ದಾರೆ.
ಎರಡನೇ ಟೆಸ್ಟ್ ನಾಲ್ಕನೇ ದಿನ ವಿರಾಟ್ ಕೊಹ್ಲಿ ಅವರ ನಾಲ್ಕನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬ್ಯಾಟ್ ಬೀಸಿದ ಇಶಾನ್ ಕಿಶನ್, ಸಿಡಿಲಬ್ಬರದ ಆಟದಿಂದ ಚೊಚ್ಚಲ ಟೆಸ್ಟ್ ಅರ್ಧಶತಕ (52* ರನ್) ಸಿಡಿಸಿದರು. ಆ ಮೂಲಕ ಭಾರತ ತಂಡ 181 ರನ್ ಕಲೆ ಹಾಕಲು ನೆರವು ನೀಡಿದ್ದರು. ಆ ಮೂಲಕ ಟೀಮ್ ಇಂಡಿಯಾ ಎದುರಾಳಿ ವೆಸ್ಟ್ ಇಂಡೀಸ್ಗೆ 365 ಕಠಿಣ ರನ್ ಗುರಿ ನೀಡಿತ್ತು. ಆದರೆ, ಮಳೆಯಿಂದ ಪಂದ್ಯದ ಐದನೇ ದಿನ ಸಂಪೂರ್ಣ ಬಲಿಯಾಯಿತು. ಮೊದಲ ಪಂದ್ಯದ ಗೆಲುವಿನ ಆಧಾರದ ಮೇಲೆ ಭಾರತ ತಂಡ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು.
ಬೇರೆ ಮಾತನ್ನು ಕೇಳಿಸಿಕೊಳ್ಳಬೇಡ: ರೋಹಿತ್ ಶರ್ಮಾ
“ರೋಹಿತ್ ಶರ್ಮಾ ನಿಜಕ್ಕೂ ಒಬ್ಬ ಅನುಭವಿ ನಾಯಕ. ಅವರು ಪ್ರತಿಯೊಬ್ಬ ಆಟಗಾರರನ್ನು ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತಾರೆ. ನಾನು ಬ್ಯಾಟ್ ಮಾಡಲು ಹೋಗುವ ಮುನ್ನ ಅವರು ನನ್ನನ್ನು ಕರೆದು, ‘ನೀನು ನಿನ್ನ ಶೈಲಿಯ ಆಟವನ್ನು ಆಡು, ನಿನ್ನ ಯೋಜನೆಗೆ ನೀನು ಬದ್ಧನಾಗಿರು, ಬೇರೆಯವರ ಮಾತನ್ನು ಕೇಳಿಸಿಕೊಳ್ಳಬೇಡ ‘ಎಂದಿದ್ದರು. ಇದು ಯುವ ಆಟಗಾರರಿಗೆ ನಾಯಕನಿಂದ ಸಿಗುವ ಸ್ಫೂರ್ತಿ ಹಾಗೂ ದೊಡ್ಡ ಬೆಂಬಲ,” ಎಂದು ಇಶಾನ್ ಕಿಶನ್ ತಿಳಿಸಿದ್ದಾರೆ.
ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಹಾಗೂ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದರೂ ಪ್ಲೇಯಿಂಗ್ XIನಲ್ಲಿ ಸ್ಥಾನ ಗಿಟ್ಟಿಸಲು ಇಶಾನ್ ಕಿಶನ್ ವಿಫಲರಾಗಿದ್ದರು. ಇದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಗ್ಗೆ ಯೋಚಿಸುತ್ತೇನೆ: ಇಶಾನ್ ಕಿಶನ್
“ನಾನು ಹೆಚ್ಚಿನ ಸಂಗತಿಗಳ ಬಗ್ಗೆ ಚಿಂತಿಸದೆ ಪಂದ್ಯದ ಮೇಲೆ ಮಾತ್ರ ಗಮನ ಕೇಂದ್ರಿಕರಿಸುತ್ತೇನೆ. ಐದು ದಿನಗಳ ಪಂದ್ಯ(ಟೆಸ್ಟ್)ದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಸವಾಲುಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಹೆಚ್ಚು ಯೋಜನೆ ಮಾಡುವ ಬದಲಿಗೆ ಪಂದ್ಯದ ಬಗ್ಗೆ ಮಾತ್ರ ಚಿಂತೆ ಮಾಡಬೇಕು. ಒಬ್ಬ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ನಾಯಕನಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಮಾತ್ರ ಆಲೋಚಿಸುತ್ತೇನೆ,” ಎಂದು ಜಾರ್ಖಂಡ್ ಮೂಲದ ಕಿಶನ್ ತಿಳಿಸಿದ್ದಾರೆ.