ನವದೆಹಲಿ: ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತು ಕೇಂದ್ರದ “ಅಸಂವಿಧಾನಿಕ” ಸುಗ್ರೀವಾಜ್ಞೆಯನ್ನು ತಮ್ಮ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆದರೆ ದೆಹಲಿಯ ಸಾಮಾನ್ಯ ಪ್ರಜೆಯ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯ ಎಂದು ಪ್ರತಿಪಾದಿಸಿದ ಭಾರತೀಯ ಜನತಾ ಪಕ್ಷ, ಅಧಿಕಾರಿಗಳನ್ನು “ಬೆದರಿಸುವುದು” ಮತ್ತು ಅಧಿಕಾರ “ದುರುಪಯೋಗ” ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯು “ಸುಪ್ರೀಂ ಕೋರ್ಟ್ನ ಘನತೆ ಮತ್ತು ಅಧಿಕಾರ”ಕ್ಕೆ “ನೇರ ಸವಾಲು ಹಾಕಿದೆ” ಎಂದು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಹೊರಡಿಸಲಾದ ಸುಗ್ರೀವಾಜ್ಞೆಯಲ್ಲಿ, ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಸೇವೆಗಳ ವಿಷಯದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಮೇ 11 ರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಈ ಬೆಳವಣಿಗೆಯು ಅರವಿಂದ್ ಕೇಜ್ರಿವಾಲ್ ಆಡಳಿತ, ಕೇಂದ್ರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ತೀವ್ರ ಘರ್ಷಣೆಗೆ ವೇದಿಕೆ ಸಿದ್ಧಪಡಿಸಿದೆ.ಈ ಸುಗ್ರೀವಾಜ್ಞೆಯು ದೇಶದ ಒಕ್ಕೂಟ ರಚನೆಯ ಮೇಲಿನ ದಾಳಿಯಾಗಿದೆ ಎಂದ ದೆಹಲಿ ಸಿಎಂ, ರಾಜ್ಯಸಭೆಯಲ್ಲಿ ಈ ಸಂಬಂಧ ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡಬೇಡಿ ಎಂದು ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ.