ಬೆಂಗಳೂರು, ಡಿಸೆಂಬರ್ 3, 2023- ಪ್ರತಿಷ್ಠೆಯ ಕಣವಾಗಿದ್ದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ
ಕಾಂಗ್ರೆಸ್ಗೆ ಐತಿಹಾಸಿಕ ಗೆಲವು ಎಂದು ವೈದ್ಯಕೀಯ ಶಿಕ್ಷಣ ಹಾಗು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಬಣ್ಣಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಕ್ಲಸ್ಟರ್ಉಸ್ತುವಾರಿ ಆಗಿದ್ದ ಶರಣಪ್ರಕಾಶ್ ಪಾಟೀಲ್ ಅವರು ಸುಮಾರು 10 ದಿನಕ್ಕೂ ಹೆಚ್ಚು ಕಾಲ ತಮಗೆ ವಹಿಸಿದ ಕ್ಷೇತ್ರಗಳಲ್ಲಿ ಶಿಸ್ತುಬದ್ಧ ಪ್ರಚಾರ ನಡೆಸಿದ್ದರು.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆ ಮಾಡಿದ್ದ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಪಾಟೀಲ್ ಅವರು ಗ್ರಾಮ ಪಂಚಾಯತ್ ನಿಂದ ಹಿಡಿದು ಹೋಬಳಿ ಮಟ್ಟದವರೆಗೂ ಪಾಟೀಲ್ ವೆವಸ್ಥಿತ ಪ್ರಚಾರ ನಡೆಸಿದ್ದರು.
ವಿಶೇಷವಾಗಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಹಾಗೂ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ, ನುಡಿದಂತೆ ನಡೆದಿರುವುದು ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಪಾಟೀಲ್ ಮನವರಿಕೆ ಮಾಡಿಕೊಟ್ಟಿದ್ದರು.
ಬಿಜೆಪಿ ಹಾಗು ಬಿಆರ್ಎಸ್ ಎಷ್ಟೇ ಅಪಪ್ರಚಾರ ನಡೆಸಿದರೂ ಮತದಾರ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ಎಸ್ ಪಕ್ಷ ತಾನು ನೀಡಿದ್ದ ಭರವಸೆಗಳನ್ನು ಮರೆತು ಕೇವಲ ಭ್ರಷ್ಟಾಚಾರವನ್ನೇ ನಡೆಸಿದ್ದರಿಂದ ಜನಾಕ್ರೋಶ ವ್ಯಾಪಕವಾಗಿ ಕಂಡುಬಂದಿತ್ತು. ಇದರ ಪರಿಣಾಮವೆ ಫಲಿತಾಂಶಕ್ಕೆ ಕೈಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.