ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಣೆ ಮಾಡಿದ್ದ ₹125 ಕೋಟಿ ನಗದು ಬಹುಮಾನ ಆಟಗಾರರು, ಕೋಚಿಂಗ್ ಸ್ಟಾಫ್, ಸಪೋರ್ಟಿಂಗ್ ಸ್ಟಾಫ್ ಸಹಿತ ವಿಶ್ವಕಪ್ ತಂಡದಲ್ಲಿದ್ದ ಅಷ್ಟೂ ಮಂದಿಗೆ ತಲುಪಿದೆ. ಆಟಗಾರರಿಗೆ ತಲಾ ₹5 ಕೋಟಿ, ಕೋಚಿಂಗ್ ಸ್ಟಾಫ್ಗೆ ತಲಾ ₹2.5 ಕೋಟಿ, ಸಪೋರ್ಟಿಂಗ್ ಸ್ಟಾಫ್ಗೆ ತಲಾ ₹2 ಕೋಟಿ, ಮೀಸಲು ಆಟಗಾರರಿಗೆ ತಲಾ ₹1 ಕೋಟಿ ಹಣವನ್ನು ನೀಡಲಾಗಿದೆ.
ಮೂವರು ಫಿಸಿಯೊಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್ಗಳು, ಇಬ್ಬರು masseurs ಮತ್ತು ಇಬ್ಬರು ಸ್ಟ್ರೆಂತ್ & ಕಂಡಿಷನಿಂಗ್ ಕೋಚ್ಗಳಿಗೆ ನಗದು ಬಹುಮಾನ ನೀಡುವ ವಿಚಾರದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಅಧಿಕಾರಿಗಳ ಮಧ್ಯೆ ಸಣ್ಣದೊಂದು ಜಟಾಪಟಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸಪೋರ್ಟಿಂಗ್ ಸ್ಟಾಫ್ಗೆ ₹2 ಕೋಟಿ ಕೊಡಲು ಬಿಸಿಸಿಐ ಸಿದ್ಧವಿರಲಿಲ್ಲ. ಅವರಿಗೇಕೆ ಅಷ್ಟೊಂದು ಹಣ ಕೊಡಬೇಕು ಎಂದು ಬಿಸಿಸಿಐ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರು ತನ್ನ ತಂಡದ ಸಪೋರ್ಟಿಂಗ್ ಸ್ಟಾಫ್ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.
ವಿಶ್ವಕಪ್ ಗೆಲುವಿನ ಹಿಂದೆ ಸಹಾಯಕ ಸಿಬ್ಬಂದಿಯ ಪಾತ್ರ ಎಷ್ಟಿದೆ ಎಂಬುದು ನನಗೆ ಗೊತ್ತು. ಅವರು ವರ್ಷಗಳ ಕಾಲ ಹಗಲೂ-ರಾತ್ರಿ ಇದಕ್ಕಾಗಿ ಶ್ರಮ ಪಟ್ಟಿದ್ದಾರೆ. ಅವರಿಲ್ಲದಿದ್ದರೆ ನಾವು ವಿಶ್ವಕಪ್ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಏನು ಸಿಗಬೇಕೋ ಅದು ಸಿಗಲೇಬೇಕು. ಇಲ್ಲವಾದಲ್ಲಿ ನಾನು ನನ್ನ ಪಾಲಿಗೆ ಬರುವ ₹5 ಕೋಟಿ ಹಣವನ್ನು ಅವರಿಗೆ ಹಂಚಿ ಬಿಡುತ್ತೇನೆ ಎಂದು ರೋಹಿತ್ ಶರ್ಮಾ ಅವರು ಖಡಕ್ ಆಗಿ ಬಿಸಿಸಿಐ ಮುಂದೆ ಹೇಳಿದ್ದಾರಷ್ಟೇ! ವಿಶ್ವ ಚಾಂಪಿಯನ್ ತಂಡದ ನಾಯಕ ಯಾವಾಗ ಹೀಗೆ ಕಡ್ಡಿ ತುಂಡದಂತೆ ಹೇಳಿದ್ರೋ, ಅಲ್ಲಿಗೆ ಬಿಸಿಸಿಐಗೆ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ.