ನವದೆಹಲಿ: ಮಳೆ ನೀರು ನುಗ್ಗಿ ಮೂವರು ಯುಪಿಎಸ್ಸಿ ವಿದ್ಯಾರ್ಥಿಗಳ (UPSC Students) ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ಗೃಹ ಇಲಾಖೆ ಸಮಿತಿ ರಚಿಸಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಲಹೆಗಳನ್ನೂ ನೀಡುವಂತೆ ಸೂಚಿಸಿದ್ದು, 30 ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಹೇಳಿದೆ.
ಸಮಿತಿಯು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ (ಗೃಹ), ದೆಹಲಿ ಸರ್ಕಾರ, ವಿಶೇಷ ಸಿಪಿ, ದೆಹಲಿ ಪೊಲೀಸ್, ಅಗ್ನಿಶಾಮಕ ಸಲಹೆಗಾರ ಮತ್ತು ಜಂಟಿ ಕಾರ್ಯದರ್ಶಿಗಳನ್ನು ಒಳಗೊಂಡಿದೆ. ರಚನೆಯಾಗಿರುವ ಸಮಿತಿ ಘಟನೆಗೆ ಕಾರಣಗಳನ್ನು ಪರಿಶೀಲಿಸುತ್ತದೆ. ಜವಾಬ್ದಾರಿಯನ್ನು ನಿರ್ಧರಿಸುತ್ತದೆ.
ಕ್ರಮಗಳನ್ನು ಸೂಚಿಸುತ್ತದೆ ಮತ್ತು ನೀತಿ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ ಎಂದು ಗೃಹ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ. ರಾವ್ ಅವರ ಐಎಎಸ್ ಸ್ಟಡಿ ಸರ್ಕಲ್ ಕೋಚಿಂಗ್ ಇನ್ಸ್ಟಿಟ್ಯೂಟ್ನ ಕಟ್ಟಡದ ನೆಲಮಾಳಿಗೆಯಲ್ಲಿ ಶನಿವಾರ ಸಂಜೆ ಪ್ರವಾಹದಿಂದಾಗಿ ಮೂವರು ಐಎಎಸ್ ಆಕಾಂಕ್ಷಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಹ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.