ಬಿಸಿಲಿನ ತಾಪ ಮತ್ತು ಅನಧಿಕೃತ ಪ್ರವಾಸಗಳಿಂದಾಗಿ ಹಜ್ ಯಾತ್ರೆಯ ವೇಳೆ 1,301 ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಭಾನುವಾರ ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸೌದಿ ಸರ್ಕಾರ, “ಆರೋಗ್ಯ ವ್ಯವಸ್ಥೆಯು ಈ ವರ್ಷ ಶಾಖದ ಒತ್ತಡದ ಹಲವಾರು ಪ್ರಕರಣಗಳನ್ನು ಪರಿಹರಿಸಿದೆ, ಕೆಲವು ವ್ಯಕ್ತಿಗಳು ಇನ್ನೂ ಆರೈಕೆಯಲ್ಲಿದ್ದಾರೆ. ದುರದೃಷ್ಟವಶಾತ್, ಸಾವಿನ ಸಂಖ್ಯೆ 1,301 ಕ್ಕೆ ತಲುಪಿದೆ. ಮೃತಪಟ್ಟವರಲ್ಲಿ ಶೇಕಡಾ 83 ರಷ್ಟು ಜನರು “ಹಜ್ ಮಾಡಲು ಅನಧಿಕೃತರಾಗಿದ್ದಾರೆ” ಮತ್ತು “ಸಾಕಷ್ಟು ಆಶ್ರಯ ಅಥವಾ ಸೌಕರ್ಯವಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ಬಹಳ ದೂರ ನಡೆದಿದ್ದಾರೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸತ್ತವರಲ್ಲಿ “ಹಲವಾರು ವೃದ್ಧರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು” ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸತ್ತವರ ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ಸಿಎನ್ಎನ್ ವರದಿ ತಿಳಿಸಿದೆ.
ಘಟನೆ ಕುರಿತು ಹೇಳಿಕೆ ನೀಡಿರುವ ಸಚಿವರು, 95 ಯಾತ್ರಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಕೆಲವರನ್ನು ರಾಜಧಾನಿ ರಿಯಾದ್ನಲ್ಲಿ ಚಿಕಿತ್ಸೆಗಾಗಿ ವಿಮಾನದಲ್ಲಿ ಕಳುಹಿಸಲಾಗಿದೆ ಎಂದು ಹೇಳಿದರು. ಸೌದಿಯಲ್ಲಿ ಹಜ್ ಯಾತ್ರಿಕರು ಮೃತಪಟ್ಟರೆ ಅಂತವರನ್ನು ಗುರುತಿಸುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿದೆ ಏಕೆಂದರೆ ಮೃತ ವ್ಯಕ್ತಿಗಳು ನೋಂದಣಿ ಮಾಡದೇ ಬಂದಿರುವುದರಿಂದ ಅವರ ಬಳಿ ಯಾವುದೇ ಅಧಿಕೃತ ದಾಖಲೆಗಳು ಇರುವುದಿಲ್ಲ ಹಾಗಾಗಿ ಗುರುತು ಪತ್ತೆಹಚ್ಚುವ ಕೆಲಸ ಕಷ್ಟ ಎಂದು ಹೇಳಿದ್ದಾರೆ. ಗುರುತು ಪತ್ತೆ ಹಚ್ಚಲಾಗದ ಯಾತ್ರಾರ್ಥಿಗಳನ್ನು ಮೆಕ್ಕಾದಲ್ಲಿ ಸಮಾಧಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬಿಸಿಲಿನ ತಾಪಕ್ಕೆ ಮೆಕ್ಕಾದಲ್ಲಿ ಮೃತಪಟ್ಟವರಲ್ಲಿ 660ಕ್ಕೂ ಹೆಚ್ಚು ಈಜಿಪ್ಟ್ ನಾಗರಿಕರು ಸೇರಿದ್ದಾರೆ ಎಂದು ಕೈರೋದಲ್ಲಿ ಸೌದಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 31 ಮಂದಿಯನ್ನು ಹೊರತುಪಡಿಸಿ ಎಲ್ಲರೂ ಅನಧಿಕೃತ ಯಾತ್ರಿಗಳು. ಸೌದಿ ಅರೇಬಿಯಾದಲ್ಲಿ ಹಲವಾರು ಅನಧಿಕೃತ ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ ನಂತರ, ಅನಧಿಕೃತ ಯಾತ್ರಿಕರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಸಹಾಯ ಮಾಡುತ್ತಿದ್ದ 16 ಟ್ರಾವೆಲ್ ಏಜೆನ್ಸಿಗಳ ಪರವಾನಗಿಯನ್ನು ಈಜಿಪ್ಟ್ ರದ್ದುಗೊಳಿಸಿದೆ. ಅಡಿಕ್ರಿಗಳ ಮಾಹಿತಿ ಪ್ರಕಾರ ಮೆಕ್ಕಾದ ಅಲ್-ಮುಯಿಸ್ಸಾಮ್ ಪ್ರದೇಶದಲ್ಲಿ ಇರುವ ತುರ್ತು ಸಂಕೀರ್ಣದಲ್ಲಿ ಹೆಚ್ಚಿನ ಸಾವು ಸಂಭವಿಸಿವೆ ಎಂದು ಹೇಳಿದ್ದಾರೆ.
ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ವರದಿಯಾದ ನೂರಾರು ಸಾವುಗಳು ಮತ್ತು ಗಾಯಗಳ ಹಿಂದಿನ ಮುಖ್ಯ ಕಾರಣ ವಿಪರೀತ ಶಾಖ ಎಂದು ಹೆಸರಿಸಲಾಗಿದೆ. ಮೆಕ್ಕಾದಲ್ಲಿ ತಾಪಮಾನವು ಸೋಮವಾರ ದಾಖಲೆಯ 125 ಡಿಗ್ರಿ ಫ್ಯಾರನ್ಹೀಟ್ಗೆ ಏರಿದೆ. ಅನಧಿಕೃತ ತೀರ್ಥಯಾತ್ರೆಗಳ ಸಂಖ್ಯೆಯಿಂದ ಸಮಸ್ಯೆಗಳು ಹೆಚ್ಚಿವೆ ಎಂದು ವಿವಿಧ ಅಧಿಕಾರಿಗಳು ಹೇಳಿದ್ದಾರೆ. ಹಜ್ ಯಾತ್ರಿಕರ ಕೇಂದ್ರಬಿಂದುವಾಗಿರುವ ಪವಿತ್ರ ನಗರವಾದ ಮೆಕ್ಕಾವನ್ನು ಕಾನೂನುಬದ್ಧವಾಗಿ ಪ್ರವೇಶಿಸಲು ಲಭ್ಯವಿರುವ 1.8 ಮಿಲಿಯನ್ ಪರವಾನಗಿಗಳಲ್ಲಿ ಒಂದನ್ನು ಸೌದಿ ಅರೇಬಿಯಾ ಪ್ರತಿಯೊಬ್ಬ ಯಾತ್ರಿಕರು ಪಡೆದುಕೊಳ್ಳಬೇಕು. ಈ ಪರವಾನಗಿಗಳು ಯಾತ್ರಿಕರಿಗೆ ಹಲವಾರು ಸಾವಿರ ಯುಎಸ್ ಡಾಲರ್ ವೆಚ್ಚವಾಗಬಹುದು.
ಮಾಧ್ಯಮ ವರದಿಯ ಪ್ರಕಾರ ಮೃತರಲ್ಲಿ ಈಜಿಪ್ಟ್ ನ 660, ಇಂಡೋನೇಷ್ಯಾದ 165, ಭಾರತದ 98 ಯಾತ್ರಿಕರು ಮತ್ತು ಜೋರ್ಡಾನ್, ಟ್ಯುನಿಷಿಯಾ, ಮೊರಾಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ ಯಾತ್ರಿಕರು ಸೇರಿದ್ದಾರೆ.