ಪ್ರೇಗ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ ಭೀಕರ ಶೂಟೌಟ್ ಘಟನೆ ಸಂಭವಿಸಿದೆ. ಚಾರ್ಲ್ಸ್ ಯೂನಿವರ್ಸಿಟಿಯಲ್ಲಿ ಡೇವಿಡ್ ಕೋಝಕ್ ಎಂಬ ವಿದ್ಯಾರ್ಥಿ ತನ್ನ ಸಹಪಾಠಿಗಳನ್ನೇ ಗುಂಡಿಟ್ಟು ಕೊಂದಿದ್ದಾನೆ. ಈ ಶೂಟೌಟ್ನಲ್ಲಿ 14 ಮಂದಿ ಬಲಿ ಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ.
24 ವರ್ಷದ ಆರೋಪಿ ಡೇವಿಡ್ ಕೋಝಕ್ ಕೂಡ ಸತ್ತಿದ್ದಾನೆ. ಈ ನರಮೇಧಕ್ಕೆ ಮುನ್ನ ಡೇವಿಡ್ ತನ್ನ ಮನೆಯಲ್ಲಿ ಅಪ್ಪನನ್ನೇ ಕೊಂದು ಹೋಗಿದ್ದ ಘಟನೆಯೂ ಬೆಳಕಿಗೆ ಬಂದಿದೆ. ಒಟ್ಟಾರೆ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಯೂನಿವರ್ಸಿಟಿಯಲ್ಲಿ ತನ್ನ ಸಹ–ವಿದ್ಯಾರ್ಥಿಗಳ ಮೇಲೆ ಡೇವಿಡ್ ಕೋಝಕ್ ಯಾಕೆ ಗುಂಡಿನ ದಾಳಿ ಎಸಗಿದ ಎಂದು ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್ ಯಾವುದಾದರೂ ಉಗ್ರ ಸಂಘಟನೆ ಜೊತೆ ಸಂಬಂಧ ಹೊಂದಿರುವ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ.