ಬೆಂಗಳೂರು: ನಗರದಲ್ಲಿ ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಹಕರ ಸೇವೆ ಹಾಗೂ ವ್ಯಾಪಾರಿಗಳ ಅನುಕೂಲತೆಗಾಗಿ 24×7 ಹೋಟೆಲ್ ಸೇರಿದಂತೆ ಇನ್ನಿತರ ಮಳಿಗೆ ತೆರಯಲು 30 ದಿನದೊಳಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ.
ಒಂದು ವೇಳೆ ಅನುಮತಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದರು. ಈ ಹಿಂದೆಯೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಡರಾತ್ರಿ 1 ಗಂಟೆವರೆಗೆ ಹೋಟೆಲ್ ಸೇವೆ ನೀಡಲು ಅನುಮತಿಸಿದ್ದವು. ಆದರೆ ಕೆಲವು ಕಾರಣ ನೀಡಿದ್ದ ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಪೊಲೀಸ್ ಇಲಾಖೆ ನಡೆಯಿಂದ ಬೆಂಗಳೂರಿನ ಜನದಟ್ಟಣೆಯ ಭಾಗದ ಹೋಟೆಲ್, ಸ್ವೀಟ್ ಸ್ಟಾಲ್, ಐಸ್ಕ್ರೀಂ ಪಾರ್ಲರ್, ಬೇಕರಿಯಂತಹ ಇನ್ನಿತರ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಗಿತ್ತು. ವ್ಯಾಪಾರ ಮಾರ್ಗಸೂಚಿ ಹೊರಡಿಸಿದ್ದರೂ ಇದರ ಪ್ರಯೋಜನವಾಗಿಲ್ಲ ಎಂದರು.
ಕೊರೊನಾ ನಂತರ ನಿರಂತರ ಬೆಲೆ ಏರಿಕೆಗಳಿಂದ ವ್ಯಾಪಾರ ಉದ್ಯಮಕ್ಕೆ ಹೊಡೆತ ಬೀಳುತ್ತಲೆ ಇದೆ. ಉದ್ಯಮದ ಏಳಿಗೆಗಾಗಿ ಹಾಗೂ ತಡರಾತ್ರಿವರೆಗೆ ಸೇವೆ ಬಯಸುವ ಗ್ರಾಹಕರ ಹಿತ ದೃಷ್ಟಿಯಿಂದ ಈಗ ಮತ್ತೊಮ್ಮೆ ಕಾಂಗ್ರೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ. ಬೆಂಗಳೂರು ಪೊಲೀಸರಿಗೂ ಮನವಿ ಮಾಡಲಾಗಿದೆ. ಒಂದು ತಿಂಗಳೊಳಗೆ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.