ಚಿಕ್ಕಮಗಳೂರು: ತರಿಕೇರೆಯ ಮಾಜಿ ಶಾಸಕ ಎಸ್. ಎಂ. ನಾಗರಾಜ್ ಅವರ ಮನೆಯಲ್ಲಿ ದರೊಡೆ ನಡೆದಿರುವುದಾಗಿ ವರದಿಯಾಗಿದೆ. ಬಂದೂಕು ಹಾಗೂ ಮಚ್ಚಿನೊಂದಿಗೆ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ದರೋಡೆ ನಡೆದಿದೆ ಎಂದು ಹೇಳಲಾಗಿದೆ.
ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿರುವ ನಾಗರಾಜ್ ಅವರ ತೋಟದ ಮನೆಯಲ್ಲಿ ದರೋಡೆ ನಡೆದಿದೆ. ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ 1ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಸಮಯದಲ್ಲಿ ದರೋಡೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಲಾಗಿದ್ದು, ದುಷ್ಕರ್ಮಿಗಳ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ದರೋಡೆಯು ಚುನಾವಣೆ ದ್ವೇಷಕ್ಕಾಗಿ ನಡೆದಿದೆಯೋ? ಅಥವಾ ಹಣಕ್ಕಾಗಿ ನಡೆದಿದೆಯೋ? ಎಂಬ ಪ್ರಶ್ನೆಗೆ ಹುಟ್ಟಿಕೊಂಡಿದ್ದು, ತನಿಖೆ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ