ಮಂಡ್ಯ :- ಮದ್ದೂರು ವಿಧಾನ ಸಭಾ ಕ್ಷೇತ್ರದ ಬೆಸಗರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಿ.ಪಂ ಮಾಜಿ ಸದಸ್ಯ ಮರಿಹೆಗ್ಗಡೆ ಅವರು ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪರ ಮತ ಪ್ರಚಾರ ನಡೆಸಿದರು. ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಬಾಳೇಗೌಡನದೊಡ್ಡಿ, ಪಣ್ಣೆದೊಡ್ಡಿ, ಮಹರನವಮಿದೊಡ್ಡಿ, ಕೆರೆಮೇಗಳದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಮ್ಮ ಬೆಂಬಲಿಗರ ಜೊತೆಗೂಡಿ ಮನೆ ಮನೆಗೆ ತೆರಳಿ ಬಿಜೆಪಿ ಪರ ಮತಯಾಚನೆ ಮಾಡಿದರು.
ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿ ಕ್ಷೇತ್ರದ ಜನತೆ ಬಿಜೆಪಿ ಪಕ್ಷದತ್ತ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಅವರ ಸುದೀರ್ಘ ಸಮಾಜ ಸೇವೆಯನ್ನು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಾರಿ ಮದ್ದೂರು ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಜಿ.ಪಂ ಸದಸ್ಯನಾಗಿದ್ದಾಗಿನಿಂದಲೂ ಸ್ವಾಮಿ ಅವರ ಪರವಾಗಿ ನಿಂತಿದ್ದೇನೆ. ಈಗಲೂ ಅವರ ಪರವಾಗಿಯೇ ಪ್ರಚಾರ ಮಾಡುತ್ತಿದ್ದೇನೆ. ನಾನು ಯಾರಿಗೂ ಮಾರಾಟವಾಗುವುದಿಲ್ಲ. ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬದ್ದವಾಗಿದ್ದೇನೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಪ್ರಚಾರದ ವೇಳೆ ಹನುಮಂತು, ರಾಮಲಿಂಗು, ರವಿ, ರಮೇಶ್, ರಾಜು, ಅಕ್ಷರಂ ವೆಂಕಟೇಶ್, ಸುರೇಶ್, ಬೋರೇಗೌಡ, ಹರ್ಷಿತಾ, ರಾಮಲಿಂಗಯ್ಯ, ರವಿಕಾಂತ್, ವರುಣ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ