ಶಿವಮೊಗ್ಗ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ (Congress) ಪಕ್ಷವನ್ನು ಯಾವ ರೀತಿ ಒಪ್ಪಿಕೊಂಡಿದ್ದೀರಿ ಎಂದು ಬಿಜೆಪಿ (BJP) ಹಿರಿಯ ನಾಯಕ ಈಶ್ವರಪ್ಪ (Eshwarappa) ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ ಶೆಟ್ಟರ್ (Jagadish Shettar) ಅವರಿಗೆ ಈಶ್ವರಪ್ಪ ಪತ್ರವನ್ನು ಬರೆದು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ನನ್ನ ಅತ್ಮೀಯ ನಮಸ್ಕಾರಗಳು.
ಸುಮಾರು 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ ದಿ.ಶಿವಪ್ಪ ಶೆಟ್ಟರು, ಭಾರತೀಯ ಜನತಾ ಪಕ್ಷದ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅವರದೇ ಪ್ರಭಾವದಲ್ಲಿ ಬೆಳೆದ ತಾವು ಸಹ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು. ಕಾಂಗ್ರೆಸ್ ಪಕ್ಷದ ದೇಶ ವಿರೋಧಿ ಧೋರಣೆಗಳನ್ನು ಸದಾ ಖಂಡಿಸುತ್ತಾ ಬಂದವರು, ಭಾರತೀಯ ಜನತಾ ಪಕ್ಷದ ಮೂಲಕ ಅನೇಕ ಬಾರಿ ಶಾಸಕರಾಗಿ ಚುನಾಯಿತರಾಗಿದ್ದು ಮಾತ್ರವಲ್ಲದೇ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಎತ್ತರಕ್ಕೆ ಬೆಳೆದವರು.
ಪ್ರಸಕ್ತ ಸಂದರ್ಭದಲ್ಲಿ ತಾಯಿಯಂತೆ ಕಾಪಾಡಿದ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಅಸಮಾಧಾನಗೊಂಡಿರುವ ತಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ಪಕ್ಷವನ್ನು ಬಿಟ್ಟು ನಂಬಿದ ಎಲ್ಲಾ ಆದರ್ಶಗಳನ್ನು ತೊರೆದು ನಮ್ಮ ಪಕ್ಷದ ಚಿಂತನೆಗೆ ವಿರುದ್ಧವಾದ ಕಾಂಗ್ರೆಸ್ ಪಕ್ಷಕ್ಕೆ ತಾವು ಸೇರಲು ಬಯಸಿರುವುದು ಮಾತ್ರ ಅತ್ಯಂತ ದುರದೃಷ್ಟಕರ.
ಮುಂದೆ ಒಂದು ದಿನ ತಾವು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದ ಸಂಧರ್ಭದಲ್ಲಿ ಸದನದಲ್ಲಿ ಗೋ ಹತ್ಯೆ ಪರ – ವಿರೋಧದ ಚರ್ಚೆ ನಡೆದರೆ ತಾವು ಗೋ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ? ಉಗ್ರ ಪಿಎಫ್ಐ ಸಂಘಟನೆ ಕುರಿತಾದ ಪರ-ವಿರೋಧದ ಚರ್ಚೆಯಲ್ಲಿ ಪಿಎಫ್ಐ ನಿರ್ಬಂಧ ತೆರವು ಮಾಡಲು ತಾವು ಸಮ್ಮತಿಸಲು ಸಾಧ್ಯವೇ? ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ಉಗ್ರ ಹೋರಾಟ ನನಗಿನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಈಗ ತಾವು ಅದೇ ಪಕ್ಷವನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ? ನಾವು ನಂಬಿ ಪ್ರತಿಪಾದಿಸುತ್ತಾ ಬಂದಿರುವ ಎಲ್ಲಾ ತತ್ವ, ಆದರ್ಶಗಳ ವಿರುದ್ಧ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡುವುದು ಹೇಗೆ ಸಾಧ್ಯ? ಈ ಕುರಿತು ಒಮ್ಮೆ ಯೋಚಿಸಿ ಎಂದು ಕೋರುತ್ತೇನೆ.