ರಾಜೀವ್ ಗಾಂಧಿ ಅವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶ ಪಡೆದ ನಾಯಕರಾಗಿದ್ದರು. ಜೊತೆಗೆ ಅವರು 40ನೇ ವಯಸ್ಸಿಗೆ ಭಾರತದ ಯುವ ಪ್ರಧಾನಮಂತ್ರಿಯಾಗುವ ಮೂಲಕ ವಿಶ್ವದ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇನ್ನು ರಾಜೀವ್ ಗಾಂಧಿ ಜನ್ಮ ದಿನದ ಹಿನ್ನಲೆ ರಾಜಕೀಯ ನಾಯಕರು ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಇಂದು ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ. ಅವರು ದೇಶದ ಆರನೇ ಪ್ರಧಾನಿಯಾಗಿದ್ದರು. ಆಗಸ್ಟ್ 20, 1944 ರಂದು ಜನಿಸಿದರು. ಶ್ರೀಮತಿ ಇಂದಿರಾ ಗಾಂಧಿ ಹಾಗೂ ಫಿರೋಝ್ ಗಾಂಧಿ ದಂಪತಿಗಳ ಮೊದಲ ಮಗ ರಾಜೀವ್ ಗಾಂಧಿ. 1951 ರಲ್ಲಿ, ರಾಜೀವ್ ಮತ್ತು ಸಂಜಯ್ ಅವರನ್ನು ಶಿವ ನಿಕೇತಾನ್ ಶಾಲೆಯಲ್ಲಿ ದಾಖಲಿಸಲಾಯಿತು. ಅಲ್ಲಿ ಶಿಕ್ಷಕರು ರಾಜೀವ್ ಅವರನ್ನು ನಾಚಿಕೆ ಮತ್ತು ಅಂತರ್ಮುಖಿ ಸ್ವಭಾವದವರು ಎನ್ನುತ್ತಿದ್ದರು. ರಾಹುಲ್ ಚಿತ್ರಕಲೆ ಮತ್ತು ರೇಖಾಚಿತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದರು.
ಅವರನ್ನು 1954 ರಲ್ಲಿ ವೆಲ್ಹಾಮ್ ಬಾಯ್ಸ್ ಸ್ಕೂಲ್ ಮತ್ತು ಡೂನ್ ಶಾಲೆಗೆ ಸೇರಿಸಲಾಯಿತು. ಎ-ಲೆವೆಲ್ಸ್ ಅನ್ನು ಅಧ್ಯಯನ ಮಾಡಲು 1961 ರಲ್ಲಿ ರಾಜೀವ್ ಅವರನ್ನು ಲಂಡನ್ಗೆ ಕಳುಹಿಸಲಾಯಿತು. 1962 ರಿಂದ 1965 ರವರೆಗೆ ಕೇಂಬ್ರಿಜ್ನ ಟ್ರಿನಿಟಿ ಕಾಲೇಜಿನಲ್ಲಿ ಅವರು ಎಂಜಿನಿಯರಿಂಗ್ ಅಧ್ಯಯನ ಮಾಡಿದರು, ಆದರೆ ಪದವಿಯನ್ನು ಪಡೆಯಲಿಲ್ಲ. 1966 ಅವರು ಇಂಪೀರಿಯಲ್ ಕಾಲೇಜ್ ಲಂಡನ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಒಂದು ಕೋರ್ಸ್ ಪ್ರಾರಂಭಿಸಿದರು, ಆದರೆ ಅದನ್ನೂ ಪೂರ್ಣಗೊಳಿಸಲಿಲ್ಲ.
1966 ರಲ್ಲಿ ರಾಜೀವ್ ಗಾಂಧಿಯವರು ಭಾರತಕ್ಕೆ ಮರಳಿದರು, ಆ ಸಮಯದಲ್ಲಿ ಅವರ ತಾಯಿ ಪ್ರಧಾನ ಮಂತ್ರಿಯಾದರು. ದೆಹಲಿಗೆ ತೆರಳಿ ಫ್ಲೈಯಿಂಗ್ ಕ್ಲಬ್ನ ಸದಸ್ಯರಾದ ರಾಜೀವ್ ಅಲ್ಲಿ ಪೈಲೆಟ್ ತರಬೇತಿ ಪಡೆದರು. 1970 ರಲ್ಲಿ ಏರ್ ಇಂಡಿಯಾ ಪೈಲಟ್ ಆಗಿ ಅವರು ನೇಮಕಗೊಂಡರು. 1968 ರಲ್ಲಿ, ಮೂರು ವರ್ಷಗಳ ಪ್ರಣಯದ ನಂತರ, ಅವರು ಇಟಲಿಯ ಮೂಲದವರಾದ ಎಡ್ವಿಗೆ ಆಂಟೋನಿಯಾ ಅಲ್ಬಿನಾ ಮಿನೊ(ಸೋನಿಯ ಗಾಂಧಿ) ರನ್ನು ವಿವಾಹವಾದರು. ಅವರ ಮೊದಲ ಮಗುವಾಗಿ ಮಗ ರಾಹುಲ್ ಗಾಂಧಿ 1970 ರಲ್ಲಿ ಜನಿಸಿದರು. 1972 ರಲ್ಲಿ, ಈ ದಂಪತಿಗೆ ಪ್ರಿಯಾಂಕಾ ಗಾಂಧಿ ಜನಿಸಿದರು.
ಜೂನ್ 23, 1980 ರಂದು, ರಾಜೀವ್ ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಅನಿರೀಕ್ಷಿತವಾಗಿ ನಿಧನರಾದರು. ಆ ಸಮಯದಲ್ಲಿ, ತನ್ನ ವಿದೇಶ ಪ್ರವಾಸದ ಭಾಗವಾಗಿ ರಾಜೀವ್ ಗಾಂಧಿಯವರು ಲಂಡನ್ನಲ್ಲಿದ್ದರು. ಸುದ್ದಿಯನ್ನು ಕೇಳಿದ ಅವರು ದೆಹಲಿಗೆ ಮರಳಿದರು ಮತ್ತು ಸಂಜಯ್ನ ದೇಹವನ್ನು ಸಮಾಧಿ ಮಾಡಿದರು. ಸಂಜಯ್ ಗಾಂಧಿಗಿಂತ ಭಿನ್ನವಾಗಿದ್ದ ರಾಜೀವ್ ರಾಜಕೀಯದಲ್ಲಿ ಆಸಕ್ತಿ ಹೊಂದಿರಲಿಲ್ಲ.
ಅಗರವಾಲ್ ಪ್ರಕಾರ, ಸಂಜಯ್ ಅವರ ಮರಣದ ನಂತರ, ಬದರಿನಾಥ್ನ ಸಂತ, ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವಾರೋಪಾನಂದ್ ಅವರು ತಮ್ಮ ಸಂತಾಪವನ್ನು ಸೂಚಿಸಲು ರಾಜೀವ್ ಅವರ ಮನೆಗೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಅವರು ಪೈಲೆಟ್ ಕನಸನ್ನು ಬಿಟ್ಟು ರಾಷ್ಟ್ರದ ಸೇವೆಗೆ ತೊಡಗಿಕೊಳ್ಳಬೇಕೆಂದು ರಾಜೀವ್ ಗಾಂಧಿ ಅವರಿಗೆ ಸಲಹೆ ನೀಡಿದರು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ರಾಜೀವ್ ಅವರನ್ನು ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಾಯಿಸಿದರು. ನಂತರ ರಾಜೀವ್ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದರು.
ರಾಜೀವ್ ಗಾಂಧಿ 16 ಫೆಬ್ರವರಿ 1981 ರಂದು ರಾಜಕೀಯ ಪ್ರವೇಶಿಸಿದರು, ಅವರು ದೆಹಲಿಯಲ್ಲಿ ರಾಷ್ಟ್ರೀಯ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. 1981 ರ ಮೇ 4 ರಂದು, ಇಂದಿರಾ ಗಾಂಧಿಯವರು ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದರು. ಅಮೇಥಿ ಕ್ಷೇತ್ರದ ಅಭ್ಯರ್ಥಿಯಾಗಿ ರಾಜೀವ್ ಅವರನ್ನು ಕಣಕ್ಕಿಳಿಸುವಂತೆ ವಸಂತ್ದಾದಾ ಪಾಟೀಲ್ ಪ್ರಸ್ತಾಪಿಸಿದರು. ಸಭೆಯಲ್ಲಿ ನೆರೆದಿದ್ದ ಎಲ್ಲಾ ಸದಸ್ಯರು ಇದನ್ನು ಒಪ್ಪಿಕೊಂಡರು. ರಾಜೀವ್ ಗಾಂಧಿ ಅಮೇಥಿಯಿಂದ ಲೋಕಸಭಾ ಅಭ್ಯರ್ಥಿ ಶರದ್ ಯಾದವ್ ಅವರನ್ನು 2,37,000 ಮತಗಳ ಅಂತರದಿಂದ ಸೋಲಿಸಿದರು. ಅವರು ಆಗಸ್ಟ್ 17 ರಂದು ಸಂಸತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (40ನೇ ವಯಸ್ಸಿನಲ್ಲಿ) ಪ್ರಧಾನಿಯಾದರು. 1948 ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (404 ಸ್ಥಾನಗಳು) ಗೆದ್ದಿದ್ದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟ ಇವರು ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. .
ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. 1991 ರಲ್ಲಿ ಭಾರತ ಸರ್ಕಾರದ ಮರಣಾನಂತರ ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಇನ್ನು ರಾಜೀವ್ ಗಾಂಧಿ ಜನ್ಮ ದಿನದ ಹಿನ್ನಲೆ ರಾಜಕೀಯ ನಾಯಕರು ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಸಹ ರಾಜೀವ್ ಗಾಂಧಿ ಅವರ ಜನ್ಮ ದಿನದ ಹಿನ್ನಲೆ ಅವರನ್ನ ನೆನೆದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್, ಶಶಿ ತರೂರ್ ಮತ್ತು ದಿಗ್ವಿಜಯ್ ಸಿಂಗ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜೀವ್ ಗಾಂಧಿ ಫೋಟೋ ಹಂಚಿಕೊಳ್ಳುವ ಮೂಲಕ ನಮ್ಮ ನಾಯಕನನ್ನ ನೆನೆದಿದ್ದಾರೆ.