ಬೆಂಗಳೂರು: ಚೀಫ್ ಸೆಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ಆಯ್ಕೆ ಅತ್ಯಂತ ಮಹತ್ವದ ನಿರ್ಧಾರ ಆಗಿದೆ. ಏಕೆಂದರೆ, ಚೀಫ್ ಸೆಲೆಕ್ಟರ್ ಹುದ್ದೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿದ ಅನುಭವ ಹೊಂದಿರುವ ಟೀಮ್ ಇಂಡಿಯಾ ಮಾಜಿ ಆಟಗಾರನ ಆಯ್ಕೆ ಆಗಿರುವುದು ಇದು ಎರಡನೇ ಬಾರಿ ಆಗಿದೆ. ಇನ್ನು ಅಜಿತ್ ಅಗರ್ಕರ್ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡದ ಪರ ಆಡಿ ಐಪಿಎಲ್ನಲ್ಲೂ ತಮ್ಮ ಕರಾಮತ್ತು ಪ್ರದರ್ಶಿದ್ದ ಅಪ್ರತಿಮ ವೇಗದ ಬೌಲರ್ ಆಗಿದ್ದರು.
ಟೀಮ್ ಇಂಡಿಯಾದ ಆಯ್ಕೆ ಸಮಿತಿಯಲ್ಲಿ ಈಗ ಶಿವಸುಂದರ್ ದಾಸ್, ಸುಬ್ರೊತೊ ಬ್ಯಾನರ್ಜಿ, ಸಲಿಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಇದ್ದು, ಐದನೇ ಸದಸ್ಯ ಹಾಗೂ ಸಮಿತಿ ಮುಖ್ಯಸ್ಥನಾಗಿ ಅಜಿತ್ ಅಗರ್ಕರ್ ಸೇರ್ಪಡೆ ಆಗಿದೆ. ಈ ಸಮಿತಿಯಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಅಜಿತ್ ಅಗರ್ಕರ್ ಅವರಿಗೆ ಇರುವ ಕಾರಣ ಅವರನ್ನು ಚೀಫ್ ಸೆಲೆಕ್ಟರ್ ಆಗಿ ನೇಮಕ ಮಾಡಲಾಗಿದೆ.
ಅಜಿತ್ ಅಗರ್ಕರ್ ಬಗ್ಗೆ ನಿಮಗೆಷ್ಟು ಗೊತ್ತು?
ತಮ್ಮ ವೃತ್ತಿಬದುಕಿನ ದಿನಗಳಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದ ಅಜಿತ್ ಅಗರ್ಕರ್, ಭಾರತ ತಂಡದ ಪರ ಒಟ್ಟು 26 ಟೆಸ್ಟ್, 191 ಒಡಿಐ ಮತ್ತು 4 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿ, ಕ್ರಮವಾಗಿ 58, 288 ಮತ್ತು 3 ವಿಕೆಟ್ಗಳನ್ನು ಉರುಳಿಸಿದ್ದಾರೆ. 1998ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಅಗರ್ಕರ್, 2007ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. 2013ರವರೆಗೂ ಅವರು ದೇಶಿ ಕ್ರಿಕೆಟ್ನಲ್ಲಿ ಕಾಣಿಸಿಕೊಂಡು ನಂತರ ನಿವೃತ್ತಿ ತೆಗೆದುಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ 2007ರಿಂದ 2013ರವರೆಗೆ ಡೆಲ್ಲಿ ಡೇರ್ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ ವೃತ್ತಿಬದುಕಿನಲ್ಲಿ ಆಡಿದ 39 ಪಂದ್ಯಗಳಲ್ಲಿ ಒಟ್ಟಾರೆ 29 ವಿಕೆಟ್ಗಳನ್ನು ಪಡೆದಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಆಟಗಾರ
ಭಾರತ ತಂಡದ ಪರ 1999, 2003 ಮತ್ತು 2007ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಅಜಿತ್ ಅಗರ್ಕರ್, 2007ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಭಾರತ ತಂಡದ ಸದಸ್ಯ ಕೂಡ ಆಗಿದ್ದರು. ಆ ಟೂರ್ನಿಯಲ್ಲಿ ಅಗರ್ಕರ್ ಭಾರತ ತಂಡದ ಪರ 3 ಪಂದ್ಯಗಳನ್ನು ಆಡಿದರು. ಸೂಪರ್ 8 ಹಂತದಲ್ಲಿನ 2 ಪಂದ್ಯಗಳು, ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಕ್ಕೆ ಆಯ್ಕೆಮಾಡಲಾದ ಆಡುವ 11ರ ಬಳಗದಲ್ಲಿ ಅಗರ್ಕರ್ಗೆ ಸ್ಥಾನ ಸಿಕ್ಕಿರಲಿಲ್ಲ.
ವಿಕೆಟ್ ಟೇಕರ್, ಪವರ್ ಹಿಟ್ಟರ್
ಟೆಸ್ಟ್ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ಇಲ್ಲದೇ ಇದ್ದರೂ, ಏಕದಿನ ಕ್ರಿಕೆಟ್ನಲ್ಲಿ ಅಜಿತ್ ಪ್ರಚಂಡ ಬೌಲರ್ ಆಗಿದ್ದರು. ವಿಕೆಟ್ ಟೇಕರ್ ಎನಿಸಿದ್ದ ಬಲಗೈ ವೇಗದ ಬೌಲರ್, ಒಡಿಐನಲ್ಲಿ ಭಾರತದ ಪರ 3ನೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಕೇವಲ ಅನಿಲ್ ಕುಂಬ್ಳೆ (334) ಮತ್ತು ಜಾವಗಲ್ ಶ್ರೀನಾಥ್ (315) ಮಾತ್ರವೇ ಅಗರ್ಕರ್ ಅವರಿಗಿಂತಲೂ ಮುಂದಿದ್ದಾರೆ. ಇನ್ನು ಬ್ಯಾಟಿಂಗ್ನಲ್ಲೂ ಆಗಾಗ ಸೈ ಎನಿಸಿಕೊಂಡಿರುವ ಅಜಿತ್, ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಶತಕ ಬಾರಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಬದುಕಿನ ಏಕಮಾತ್ರ ಶತಕ ಕೂಡ. ಒಡಿಐ ಕ್ರಿಕೆಟ್ನಲ್ಲೂ 95 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಕೆಳ ಕ್ರಮಾಂಕದಲ್ಲಿ ಪವರ್ ಹಿಟ್ಟಿಂಗ್ ಮೂಲಕ ಹಲವು ಬಾರಿ ಭಾರತ ತಂಡಕ್ಕೆ ನೆರವಾಗಿದ್ದರು.