ಒಂದು ತಿಂಗಳ ಹಿಂದಷ್ಟೇ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಗಳು ಝಹೀರ್ ನನ್ನು ಮದುವೆಯಾಗುವುದು ಹಿರಿಯ ನಟ ಶತ್ರುಘ್ನ ಸಿನ್ಹಾ ಅವರಿಗೆ ಕೊಂಚವು ಇಷ್ಟವಿರಲಿಲ್ಲ ಅನ್ನೋದು ಸಾಕಷ್ಟು ವರದಿಯಾಗಿತ್ತು. ಅಪ್ಪನ ಮಾತನ್ನೂ ಧಿಕ್ಕರಿಸಿ ಸೋನಾಕ್ಷಿ ಸಿನ್ಹಾ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ನಡುವೆ ಶತ್ರುಘ್ನ ಸಿನ್ಹಾ ಸಹೋದರ ಲವ್ ಸಿನ್ಹಾ ಕೂಡ ಮದುವೆಗೆ ಹಾಜರಾಗದೇ ಇದ್ದಿದ್ದು ಈ ಊಹಾಪೋಹಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಂತಾಗಿತ್ತು. ಆದರೆ, ಸೋನಾಕ್ಷಿ ಸಿನ್ಹಾ ಮದುವೆಯ ಕುರಿತಾಗಿ ತಂದೆಯ ಜೊತೆ ಮೊದಲ ಬಾರಿ ಮಾತನಾಡಿದ ಸಮಯವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಮದುವೆಯ ಕುರಿತಾಗಿ ಸ್ಪಷ್ಟ ನಿರ್ಧಾರ ಮಾಡುವ ಮುನ್ನ ತಂದೆಯಿಂದ ಸಂಪೂರ್ಣ ಒಪ್ಪಿಗೆ ಸಿಕ್ಕಿತ್ತು ಎಂದೂ ಅವರು ಹೇಳಿದ್ದಾರೆ. ಆ ಮೂಲಕ ಮದುವೆ ವಿಚಾರದಲ್ಲಿ ಶತ್ರುಘ್ನ ಸಿನ್ಹಾ ಬೇಸರ ಹೊಂದಿದ್ದರು ಎಂಬ ಸುದ್ದಿಯನ್ನು ನಟಿ ತಳ್ಳಿ ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ಜಹೀರ್ ಇಕ್ಬಾಲ್ರನ್ನು ಮದುವೆಯಾಗುವ ವಿಚಾರವನ್ನು ತಂದೆಗೆ ಹೇಳುವಾಗ ಭಯವಾಗಿದ್ದು ಹೌದು ಎಂದಿದ್ದಾರೆ. ನನ್ನ ಪರವಾಗಿ ತಂದೆಯ ಬಳಿ ಮಾತನಾಡುವುದಾಗಿ ಜಹೀರ್ ಕೂಡ ತಿಳಿಸಿದ್ದ. ಆದರೆ ಕೊನೆಗೆ ತಂದೆಯೊಂದಿಗೆ ನಾನೇ ಮಾತನಾಡುವ ಧೈರ್ಯದ ನಿರ್ಧಾರ ಮಾಡಿದ್ದೆ’ ಎಂದು ಸೋನಾಕ್ಷಿ ಹೇಳಿದ್ದಾರೆ.
ಆ ದಿನ ನಾನು ಅವರ ಬಳಿ ಹೋಗಿದ್ದೆ. ಅವರ ಪಕ್ಕದಲ್ಲಿಯೇ ಕುಳಿತುಕೊಂಡಿದ್ದೆ. ನನ್ನ ತಂದೆ ತಮಾಷೆಯಾಗಿ ಮಾತನಾಡೋದನ್ನ ಇಷ್ಟಪಡುತ್ತಾರೆ ಎಂದು ಗೊತ್ತಿತ್ತು. ಸಂಪೂರ್ಣ ವಿಶ್ವಾಸದಲ್ಲಿ ಕುಳಿತುಕೊಂಡು ನಾನು ತಂದೆಯ ಬಳಿ, ‘ಮಗಳ ಮದುವೆ ಆಗಿಲ್ಲ ಎನ್ನುವ ಚಿಂತೆ ನಿಮಗೆ ಇಲ್ವಾ?’ ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಅವರು, ‘ಖಂಡಿತವಾಗಿಯೂ ಇದೆ. ನಾನೂ ಕೂಡ ನಿಮ್ಮ ಅಮ್ಮನೊಂದಿಗೆ ಈ ಬಗ್ಗೆ ಪ್ರಶ್ನೆ ಮಾಡ್ತಾ ಇರ್ತೇನೆ. ಯಾಕೆ ಏನಾಯ್ತು?’ ಎಂದು ಕೇಳಿದರು. ಈ ವೇಳೆ ನಾನು ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದೆ. ಇದಕ್ಕೆ ತಕ್ಷಣವೇ ನನ್ನ ತಂದೆ, ಹಾಗಿದ್ದರೆ ನಿನಗೆ ಸೂಕ್ತವಾದ ಗಂಡು ಹುಡುಕುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.ಅದಕ್ಕೆ ನಾನು, ಬೇಡ, ನಾನೀಗಲೇ ಹುಡುಕಿಕೊಂಡಿದ್ದೇನೆ ಎಂದು ಹೇಳಿದರು.
ಆ ಬಳಿಕ ನಾನು ಜಹೀರ್ ಕುರಿತಾಗಿ ತಂದೆಗೆ ತಿಳಿಸಿದೆ. ಸುಮಾರು ವರ್ಷಗಳಿಂದ ಒಟ್ಟಿಗೆ ಇದ್ದೇವೆ. ಉತ್ತಮ ಸ್ನೇಹಿತನಾಗಿರುವ ಕಾರಣ, ಆತನೊಂದಿಗೆ ನಾನು ಖುಷಿ ಖುಷಿಯಾಗಿ ಇರುತ್ತೇನೆ ಎಂದು ಹೇಳಿದೆ. ತಂದೆಯೊಂದಿಗೆ ಅತ್ಯಂತ ಖುಷಿಯಾಗಿ ಮಾತನಾಡಿದೆ. ನನ್ನ ತಲೆಯಲ್ಲಿ ಈ ವಿಚಾರವನ್ನು ಬಹಳ ಕ್ಲಿಷ್ಟ ಮಾಡಿಕೊಂಡಿದ್ದೆ. ಆದರೆ, ತಂದೆ ಬಹಳ ಸಲೀಸಾಗಿ ಮಾತನಾಡಿದರು. ಈ ಮಾತುಕತೆಯ ವೇಳೆ ನನ್ನ ತಂದೆ ಹೇಳಿದ ಬೆಸ್ಟ್ ಮಾತೆಂದರೆ, ನೀವಿಬ್ಬರೂ ವಯಸ್ಕರರು. ಪರಸ್ಪರ ಪ್ರೀತಿ ಮಾಡ್ತಾ ಇದ್ದೀರಿ. ನಿಮಗೆ ಒಕೆ ಆಗಿದ್ದರೆ, ಬೇರೆಯವರು ಏನು ಮಾತನಾಡಲು ಸಾಧ್ಯ ಎಂದು ಹೇಳಿದ್ದರು. ಮದುವೆಗೆ ಒಕೆ ಎಂದು ಹೇಳಿದ್ದರು. ನಮ್ಮ ಸಂಭಾಷಣೆ ಅಷ್ಟು ಕೂಲ್ ಆಗಿ ನಡೆದಿತ್ತು ಎಂದು ಸೋನಾಕ್ಷಿ ಹೇಳಿದ್ದಾರೆ.
ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಅಬ್ಬಾಸ್ ಜೂನ್ 23 ರಂದು ವಿವಾಹವಾಗಿದ್ದರು. ಕುಟುಂಬದ ಆಪ್ತರಷ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ದಿನ ಆಯೋಜನೆ ಮಾಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು. ಸದ್ಯ ಸೋನಾಕ್ಷಿ ಮದುವೆಯ ಕುರಿತು ಹರಡಿದ್ದ ಗಾಸಿಪ್ ಸುದ್ದಿಗೆ ಸ್ವತಃ ನಟಿಯೇ ಫುಲ್ ಸ್ಟಾಪ್ ಇಟ್ಟಿದ್ದಾರೆ.