ಬೆಂಗಳೂರು: “ಕುಮಾರಸ್ವಾಮಿ ಹಾಗು ದೇವೇಗೌಡರು ತಮ್ಮ ಕುಟುಂಬದ ಸದಸ್ಯರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿ, ಜೆಡಿಎಸ್ ಪಕ್ಷವನ್ನು ಹೇಗೆ ಕಟ್ಟುತ್ತಾರೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು. ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣದ ಜೆಡಿಎಸ್ ನಾಯಕರಾದ ಅಕ್ಕೂರುದೊಡ್ಡಿ ಶಿವಣ್ಣ, ಮತ್ತಿತರರ ನಾಯಕರು ಹಾಗೂ ಕಾರ್ಯಕರ್ತರನ್ನು ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ದೇವೇಗೌಡರು ಪಕ್ಷದ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ಕೊಟ್ಟ ಪರಿಣಾಮ ಆ ಪಕ್ಷ ಈ ಸ್ಥಿತಿ ತಲುಪಿದೆ. ಈಗ ತಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿದವರನ್ನೇ ಕರೆದುಕೊಂಡು ಒಕ್ಕಲಿಗರ ಮಠಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಕಾರ್ಯಕರ್ತರಿಗೆ ಒಂದು ಸಣ್ಣ ಅಧಿಕಾರವನ್ನಾದರೂ ಕೊಟ್ಟರಾ? ಅಧಿಕಾರ ಇದ್ದಾಗಲೇ ಏನು ಮಾಡಲಿಲ್ಲ. ಕಾರ್ಯಕರ್ತರು ಇಲ್ಲದೆ ಯಾವ ಪಕ್ಷ ಇರಲು ಸಾಧ್ಯ?
ಒಬ್ಬರಿಗೊಬ್ಬರು ರಾಜಕೀಯವಾಗಿ ಒಂದು ಗತಿ ಕಾಣಿಸುತ್ತಾರೆ:
ಚನ್ನಪಟ್ಟಣದವರಿಗೆ ರಾಜಕಾರಣ ಹೊಸದಲ್ಲ. ಆದರೆ ಇಂದು ನಡೆಯುತ್ತಿರುವ ರಾಜಕಾರಣ ನೋಡಿದರೆ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂದು ಅರ್ಥವಾಗುತ್ತಿಲ್ಲ. ಕುಮಾರಸ್ವಾಮಿ, ಯೋಗೇಶ್ವರ್ ಅವರು ಆಡಿದ್ದ ಮಾತುಗಳು ಒಂದೇ ಎರಡೇ. ಅವರು ಈಗ ಏನಾದರೂ ಮಾಡಿಕೊಳ್ಳಲಿ. ಚನ್ನಪಟ್ಟಣದಲ್ಲಿ ದಳ ಮತ್ತು ಬಿಜೆಪಿ ಒಂದಾಗಲು ಸಾಧ್ಯವೇ? ಚುನಾವಣೆ ಮುಗಿಯುವ ವೇಳೆಗೆ ಕಾಂಗ್ರೆಸ್ ಅವರಿಗೆ ಏನೂ ಮಾಡದೇ ಇದ್ದರೂ ಪರಸ್ಪರ ಒಬ್ಬರಿಗೊಬ್ಬರು ಯಾವ ಗತಿ ಮಾಡಬೇಕೋ ಮಾಡುತ್ತಾರೆ. ಇವರ ರಾಜಕೀಯಕ್ಕೆ ಸ್ವಾರ್ಥಕ್ಕೆ ಕಾರ್ಯಕರ್ತರು ಏನಾಗಬೇಕು. ಅವರು ಯಾರಿಗಾಗಿ ದುಡಿದರು, ಹೋರಾಟ ಮಾಡಿದರು? ಕಳೆದ ಒಂದು ತಿಂಗಳಲ್ಲಿ ಸುಮಾರು ಹತ್ತು ಸಾವಿರ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಎಲ್ಲಾ ಕ್ಷೇತ್ರದಲ್ಲೂ ನಮಗೆ ಮುನ್ನಡೆ:
ನಮಗೆ ಪ್ರತಿ ಬಾರಿ ಹಿನ್ನಡೆಯಾಗುತ್ತಿದ್ದ ಬೆಂಗಳೂರು ದಕ್ಷಿಣದಲ್ಲೂ ಈ ಬಾರಿ ನಮಗೆ ಮುನ್ನಡೆ ಸಿಗುತ್ತಿದೆ. ಅದರ ಜತೆ ರಾಜರಾಜೇಶ್ವರಿ ನಗರ, ಆನೇಕಲ್ ನಲ್ಲೂ ನಮಗೆ ಲೀಡ್ ಬರಲಿದೆ. ಎಲ್ಲೂ ಮೋದಿ ಗಾಳಿ ಇಲ್ಲ. ಕುಮಾರಸ್ವಾಮಿ ಅವರು ದೆಹಲಿಯಿಂದ ಒಂದು ದಿನ ಬಂದು ಬಿಜೆಪಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದರು. ಮರುದಿನ ನನ್ನ ಮೇಲೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರು ಸಿಎಂ ಆಗಲಿ ಎಂದು ಬೆಂಬಲ ನೀಡಿದರೆ, ನಾನೇ ವಿಷ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಮ್ಮ ಕಾರ್ಯಕರ್ತರ ವಿರೋಧದ ನಡುವೆ ಅವರಿಗೆ ಬೆಂಬಲ ಕೊಟ್ಟಿದ್ದೆ.
ಈ ಚುನಾವಣೆಯನ್ನು ದೇಶವೇ ನೋಡುತ್ತಿದೆ. ಆದರೂ ನೀವು ತಲೆ ಕೆಡಿಸಿಕೊಳ್ಳಬೇಡಿ. 2013ರಲ್ಲಿ ಉಪಚುನಾವಣೆ ಎದುರಾದಾಗ ನಾನು ಮಂತ್ರಿಯಾಗಿರಲಿಲ್ಲ. ಆಗ ನಮ್ಮ ಕೇವಲ 3 ಶಾಸಕರೂ ಇದ್ದರೂ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರು ಸ್ಪರ್ಧೆ ಮಾಡಿದಾಗ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದರು.