ಎಲೆಕ್ಷನ್ಗೆ ಇಡೀ ರಾಜ್ಯ ಸಜ್ಜಾಗ್ತಿದೆ. ಮತದಾನಕ್ಕೆ ದಿನಗಣನೆ ಶುರುವಾಗಿದೆ. ನೀವು ನಿಮ್ಮ ನಿಮ್ಮ ಏರಿಯಾಗಳಲ್ಲಿ ವೋಟ್ ಹಾಕೋದು ಹೇಗೆ? ವೋಟಿಂಗ್ ಕೇಂದ್ರಗಳನ್ನು ಹುಡುಕೋದು ಹೇಗೆ? ಯಾವ ಬೂತ್ನಲ್ಲಿ ನಿಮ್ಮ ಹೆಸರು ಇರುತ್ತೆ? ಅದನ್ನು ಕಂಡು ಹಿಡಿಯೋಕೆ ಕಷ್ಟ ಪಡಬೇಕಿಲ್ಲ. ವೋಟ್ ಹಾಕೋದು ತುಂಬಾನೇ ಸುಲಭ! ಮತದಾನ ಪ್ರಕ್ರಿಯೆಯ ಇಂಚಿಂಚೂ ಮಾಹಿತಿಯನ್ನು ವಿವರಿಸುವ ಪ್ರಯತ್ನ ಇಲ್ಲಿದೆ.. ನೀವು ಮೊದಲ ಬಾರಿ ವೋಟ್ ಮಾಡುತ್ತಿದ್ದರೆ ಈ ಮಾಹಿತಿ ನಿಮಗೆ ಬೇಕೇ ಬೇಕು
ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ವೇಳೆ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಈ ದಾಖಲೆಯನ್ನು ಸುರಕ್ಷಿತವಾಗಿ ಇಟ್ಟುಕೊಂಡಿರಬೇಕು. ಕೆಲವು ವೇಳೆ ನೀವು ಎಲ್ಲೋ ಇಟ್ಟು ಮರೆತಿರಬಹುದು, ಅಥವಾ ಕಳೆದು ಹೋಗಿರಬಹುದು. ಇಂಥಾ ಹೊತ್ತಲ್ಲೂ ಕೂಡಾ ನೀವು ಮತದಾನ ಮಾಡೋಕೆ ಯಾವುದೇ ಅಡ್ಡಿ ಆತಂಕ ಇಲ್ಲ. ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ, ಶಾಸಕರು ಸಂಸದರ ಗುರುತಿನ ಚೀಟಿ, ಆಧಾರ್ ಕಾರ್ಡ್ ಬಳಕೆ ಮಾಡಿ ನೀವು ಮತ ಚಲಾವಣೆ ಮಾಡಬಹುದು.
ಮತಗಟ್ಟೆ ಎದುರು ಜನರು ತಮ್ಮ ವೋಟರ್ ಐಡಿ ಕಾರ್ಡ್ ಹಿಡಿದು ಸಾಲುಗಟ್ಟಿ ನಿಂತಿರುವ ಫೋಟೋ, ವಿಡಿಯೋಗಳನ್ನ ನೀವು ನೋಡಿರ್ತೀರಿ. ಹೀಗೆ ಸಾಲುಗಟ್ಟಿ ನಿಂತ ಜನರನ್ನು ಒಬ್ಬೊಬ್ಬರಾಗಿ ಮತಗಟ್ಟೆ ಒಳಗೆ ಬಿಡಲಾಗುತ್ತೆ. ಮತದಾರರು ಮತಗಟ್ಟೆ ಒಳಗೆ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್, ಕ್ಯಾಮರಾ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣವನ್ನ ಬಳಕೆ ಮಾಡುವಂತಿಲ್ಲ. ಇದು ನಿಮ್ಮ ಗಮನದಲ್ಲಿ ಇರಲಿ. ನೀವು ಮತಗಟ್ಟೆ ಒಳಗೆ ಎಂಟ್ರಿ ಕೊಡುತ್ತಿದ್ದಂತೆಯೇ ಮೊದಲಿಗೆ ಮತಗಟ್ಟೆ ಅಧಿಕಾರಿ ನಿಮ್ಮ ಹೆಸರು ವೋಟರ್ ಲಿಸ್ಟ್ನಲ್ಲಿ ಇದೆಯೇ ಎಂದು ಪರಿಶೀಲನೆ ಮಾಡುತ್ತಾರೆ. ನಂತರ ನಿಮ್ಮ ಗುರುತಿನ ಚೀಟಿಯನ್ನು ಪರಿಶೀಲನೆ ಮಾಡುತ್ತಾರೆ. ಇದಾದ ಬಳಿಕ ಎರಡನೇ ಮತಗಟ್ಟೆ ಅಧಿಕಾರಿ ನಿಮ್ಮ ಬೆರಳಿಗೆ ಇಂಕ್ ಹಾಕುತ್ತಾರೆ. ಜೊತೆಗೆ ತಮ್ಮ ದಾಖಲಾತಿ ಪುಸ್ತಕದಲ್ಲಿ ನಿಮ್ಮ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಕಿಸಿಕೊಂಡು ನಿಮ್ಮ ಕೈಗೆ ಒಂದು ಚೀಟಿ ಕೊಡ್ತಾರೆ. ನಂತರ ನಿಮ್ಮನ್ನು ಮೂರನೇ ಮತಗಟ್ಟೆ ಅಧಿಕಾರಿ ಬಳಿ ಕಳಿಸುತ್ತಾರೆ. 2ನೇ ಮತಗಟ್ಟೆ ಅಧಿಕಾರಿ ನಿಮಗೆ ಕೊಟ್ಟ ಚೀಟಿಯನ್ನು ನೀವು 3ನೇ ಮತಗಟ್ಟೆ ಅಧಿಕಾರಿಗೆ ಕೊಡಬೇಕು. ನಂತರ ನಿಮ್ಮ ಬೆರಳಿಗೆ ಇಂಕ್ ಹಾಕಿರುವುದನ್ನು ತೋರಿಸಬೇಕು. ಇದನ್ನು ಖಚಿತಪಡಿಸಿಕೊಂಡ ನಂತರ ನಿಮ್ಮನ್ನು ಇವಿಎಂ ಯಂತ್ರ ಇರುವ ಪೆಟ್ಟಿಗೆ ಬಳಿಗೆ ಕಳಿಸಲಾಗುತ್ತದೆ. ಇವಿಎಂ ಯಂತ್ರದಲ್ಲಿ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ಅಭ್ಯರ್ಥಿಗಳ ಹೆಸರು, ಚಿಹ್ನೆ ಇರುತ್ತದೆ. ಪ್ರತಿ ಅಭ್ಯರ್ಥಿಯ ಹೆಸರು, ಚಿಹ್ನೆ ಎದುರಿಗೆ ಬಟನ್ ಇರುತ್ತದೆ. ನಿಮ್ಮ ಇಷ್ಟದ ಅಭ್ಯರ್ಥಿ ಎದುರಿನ ಬಟನ್ ಒತ್ತಿದ ಕೂಡಲೇ ಬೀಪ್ ಸೌಂಡ್ ಬರುತ್ತದೆ. ಆಗ ನೀವು ಮತದಾನ ಮಾಡಿದ್ದು ದೃಢವಾಗುತ್ತದೆ. ನಂತರ ಇವಿಎಂ ಯಂತ್ರದ ಪಕ್ಕದಲ್ಲಿ ಇರುವ ವಿವಿ ಪ್ಯಾಟ್ ಯಂತ್ರದಲ್ಲಿ ಒಂದು ಚೀಟಿ ಬರುತ್ತದೆ. ಈ ಚೀಟಿಯಲ್ಲಿ ನೀವು ಯಾರಿಗೆ ಮತ ಹಾಕಿದಿರಿ, ಅವರ ಹೆಸರು, ಅವರ ಪಕ್ಷದ ಚಿಹ್ನೆ ಏನು ಅನ್ನೋದು ಕಾಣುತ್ತದೆ. ಕೇವಲ 7 ಸೆಕೆಂಡ್ಗಳ ಕಾಲ ಮಾತ್ರ ಅದು ನಿಮಗೆ ಕಾಣುತ್ತದೆ. ನಂತರ ವಿವಿ ಪ್ಯಾಟ್ನ ಬಾಕ್ಸ್ ಒಳಗೆ ಬಿದ್ದು ಸೀಲ್ ಆಗುತ್ತದೆ. ಇವಿಎಂ ಯಂತ್ರದಲ್ಲಿ ನೀವು ಕೇವಲ ಅಭ್ಯರ್ಥಿಗಳು ಮಾತ್ರವಲ್ಲ, ನೋಟಾ ಆಯ್ಕೆಯನ್ನೂ ಮಾಡಬಹುದು. ನಿಮಗೆ ನಿಮ್ಮ ಕ್ಷೇತ್ರದ ಯಾವುದೇ ಅಭ್ಯರ್ಥಿಗೂ ಮತ ಹಾಕಲು ಇಷ್ಟವಿಲ್ಲವಾದರೆ ನೋಟ ಬಟನ್ ಒತ್ತುವ ಮೂಲಕ ನಿಮ್ಮ ಮತದಾನ ಪ್ರಕ್ರಿಯೆ ಮುಗಿಸಬಹುದು.
ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇದೆಯೋ? ಇಲ್ಲವೋ? ಎಂಬ ಮಾಹಿತಿ ಪಡೆದ ನಂತರ, ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇರುವ ಅಧಿಕೃತ ಮತಗಟ್ಟೆಯನ್ನೂ ಖಚಿತಪಡಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯವಾಗಿ ಯಾವುದೇ ಒಂದು ಪ್ರದೇಶದಲ್ಲಿ ಬಹಳ ದಿನಗಳಿಂದ ನೆಲೆಸಿದ್ದವರಿಗೆ ಮತಗಟ್ಟೆ ಹುಡುಕೋದು ಕಷ್ಟ ಆಗೋದಿಲ್ಲ. ಗ್ರಾಮಾಂತರ ಭಾಗದಲ್ಲಂತೂ ಒಂದು ಹಳ್ಳಿಗೆ ಅಥವಾ ಹಲವು ಹಳ್ಳಿಗಳನ್ನು ಸೇರಿಸಿ ಒಂದೇ ಮತಗಟ್ಟೆ ಇರುತ್ತೆ. ಆದ್ರೆ, ನಗರ ಭಾಗದಲ್ಲಿ ಜನರು ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಮನೆ ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ ಮತಗಟ್ಟೆಗಳೂ ಕೂಡಾ ಬದಲಾವಣೆ ಆಗುತ್ತದೆ. ಹೀಗಾಗಿ, ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇರುವ ಮತಗಟ್ಟೆ ಹುಡುಕೋದಕ್ಕೂ ಚುನಾವಣಾ ಆಯೋಗ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ನೀವು Electoralsearch.inಗೆ ಲಾಗ್ ಇನ್ ಆಗಬಹುದು. ಅಥವಾ voter helpline app ಮೂಲಕವೂ ನೀವು ನಿಮ್ಮ ಮತಗಟ್ಟೆ ಮಾಹಿತಿ ಪಡೆಯಬಹುದು. ಇದಲ್ಲದೆ ನೀವು ವೋಟರ್ ಹೆಲ್ಪ್ ಲೈನ್ಗೂ ಸಂಪರ್ಕಿಸಬಹುದು. ಮೊದಲಿಗೆ ನಿಮ್ಮ ಏರಿಯಾದ ಎಸ್ಡಿಟಿ ಕೋಡ್ ನಮೂದಿಸಿ ನಂತರ 1950 ನಂಬರ್ ಎಂಟರ್ ಮಾಡಿ ಕರೆ ಮಾಡಿದರೆ ಮಾಹಿತಿ ಸಿಗುತ್ತದೆ. ಜೊತೆಗೆ ಇದೇ ನಂಬರ್ಗೆ ನಿಮ್ಮ ಮತಗಟ್ಟೆ ಮಾಹಿತಿಯನ್ನೂ ಎಸ್ಎಂಎಸ್ ಮೂಲಕ ಪಡೆಯಬಹುದು.