ಬೆಂಗಳೂರು: ಬೆಳಗಾವಿ ಭಾಗದ ಪ್ರಭಾವಿ ಲಿಂಗಾಯಿತ ನಾಯಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆಯುವುದು ಖಚಿತವಾಗುತ್ತಲೇ ಅಖಾಡಕ್ಕಿಳಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶುಕ್ರವಾರ ದಿನವಿಡೀ ನಡೆಸಿದ ‘ಆಪರೇಷನ್’ ಕುತೂಹಲಕರವಾಗಿತ್ತು.
ಎರಡು ದಿನಗಳ ಹಿಂದೆ ಬಿಜೆಪಿ ಪ್ರಕಟಿಸಿದ ಪಟ್ಟಿಯಲ್ಲಿ ಅಥಣಿ ಕ್ಷೇತ್ರದಿಂದ ತಮಗೆ ಕೊಕ್ ನೀಡಿದ್ದರಿಂದ ಆಕ್ರೋಶಗೊಂಡು ಬಿಜೆಪಿ ತೊರೆಯುವ ಮಾತನಾಡಿದ್ದ ಲಕ್ಷ್ಮಣ ಸವದಿ ಜತೆ ಕಾಂಗ್ರೆಸ್ ನಾಯಕರು ನಿರಂತರ ಸಂಪರ್ಕ ಕಾಯ್ದುಕೊಂಡಿದ್ದರು. ವಿಧಾನ ಪರಿಷತ್ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಹೊರಡಲು ತಯಾರಾಗಿದ್ದ ಸವದಿ ಅವರಿಗಾಗಿ ಡಿಕೆ ಶಿವಕುಮಾರ್ ಬೆಳಗಾವಿಗೆ ವಿಶೇಷ ವಿಮಾನ ಕಳಿಸಿದ್ದರು.
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವನ್ನು ಉತ್ಸಾಹದಿಂದ ಕೈಗೆತ್ತಿಕೊಂಡ ಡಿಕೆ ಶಿವಕುಮಾರ್, ಪ್ರಭಾವಿ ಲಿಂಗಾಯತ ಬಿಜೆಪಿ ನಾಯಕನನ್ನು ಪಕ್ಷದ ತೆಕ್ಕೆಗೆ ಸೆಳೆದುಕೊಳ್ಳುವ ಜತೆಗೆ, ಪರಮಶತ್ರು ರಮೇಶ್ ಜಾರಕಿಹೊಳಿಗೂ ಟಕ್ಕರ್ ನೀಡಲು ಮುಂದಾದರು. ಅದಕ್ಕಾಗಿ ಸವದಿ ಅವರನ್ನು ಬೆಂಗಳೂರಿಗೆ ಕರೆತರಲು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮೇಲ್ಮನೆ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಜವಾಬ್ದಾರಿ ನೀಡಿದರು.
ವಿಶೇಷ ವಿಮಾನದಲ್ಲಿ ಸವದಿ ಅವರನ್ನು ಚನ್ನರಾಜ ಹಟ್ಟಿಹೊಳಿ ಬೆಂಗಳೂರಿಗೆ ಕರೆದುಕೊಂಡು ಬಂದರು. ನೇರವಾಗಿ ಡಿಕೆ ಶಿವಕುಮಾರ್ ಮನೆಗೆ ಸವದಿ ಬಂದಾಗ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ಡಿಕೆ ಶಿವಕುಮಾರ್ ನಿವಾಸದಲ್ಲಿದ್ದರು. ಬಳಿಕ ಎಲ್ಲರೂ ಒಟ್ಟಾಗಿ ಕುಮಾರಕೃಪದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದರು.
ಸುರ್ಜೇವಾಲಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಲಕ್ಷ್ಮಣ್ ಸವದಿ ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಅಂತೆಯೇ, ಸವದಿ ಅವರು ತಮ್ಮ ಆಪ್ತ ಸಹಾಯಕನ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಒಳಗೊಂಡು ಪಕ್ಷದ ಎಲ್ಲ ಪದಾಧಿಕಾರಿ ಸ್ಥಾನಗಳಿಗೆ ರಾಜೀನಾಮೆ ಪತ್ರ ರವಾನಿಸಿದರು. ಖುದ್ದು ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಅಂಗೀಕಾರವಾದ ಬಳಿಕ ಕೆಪಿಸಿಸಿ ಕಚೇರಿಗೆ ತೆರಳಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.
ಸಂಧಾನದ ಅವಕಾಶಕ್ಕೆ ಆಸ್ಪದ ಕೊಡದ ಡಿಕೆಶಿ
ಲಕ್ಷ್ಮಣ್ ಸವದಿ ಅವರ ಮನವೊಲಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಪ್ರಯತ್ನ ನಡೆಸುತ್ತಿರುವ ಸುಳಿವರಿತ ಡಿಕೆ ಶಿವಕುಮಾರ್ ಅವರು ತಕ್ಷಣ ಕಾರ್ಯಾಚರಣೆಗೆ ಇಳಿದರು. ಸವದಿ ಅವರನ್ನು ಪಕ್ಷಕ್ಕೆ ಕರೆತರುವ ಕಾರ್ಯದಲ್ಲಿ ಸಾಫಲ್ಯಕ್ಕಾಗಿ ಬೇರೆ ಕೆಲಸಗಳನ್ನು ಬದಿಗಿರಿಸಿ ದಿನವಿಡೀ ಓಡಾಡಿದರು. ಕೆಪಿಸಿಸಿ ಅಧ್ಯಕ್ಷರ ಈ ಕೆಲಸಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಸಾಥ್ ನೀಡಿದರು.
ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ
ಸಭಾಪತಿ ಬಸವರಾಜ ಹೊರಟ್ಟಿ ಅವರ ಸರಕಾರಿ ನಿವಾಸದಲ್ಲಿ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್ ಸವದಿ, ”ನನ್ನ ರಾಜೀನಾಮೆ ಅಂಗೀಕಾರವಾಗಿದೆ. ಇನ್ನು ಬಿಜೆಪಿಗೂ ನನಗೂ ಯಾವ ಸಂಬಂಧವಿಲ್ಲ. ನನ್ನ ಹೆಣ ಕೂಡ ಇನ್ನು ಮುಂದೆ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ,” ಎಂದು ಪ್ರಕಟಿಸಿದರು.