ಬೆಂಗಳೂರು: ಪಿಎಸ್ಐ ಹಗರಣ ನ್ಯಾಯಾಂಗ ತನಿಖೆಗೆ ವಹಿಸಿದ್ದು ದ್ವೇಷದ ರಾಜಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದವರು ಪಿಎಸ್ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ. ಈ ದ್ವೇಷದ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಅನ್ನುವುದು ಗೊತ್ತಾಗುತ್ತಿಲ್ಲ.
ಪಿಎಸ್ಐ ಹಗರಣ ನಾವೇ ಹೊರಗೆ ತಂದು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ.ಈ ಹಗರಣದಲ್ಲಿ ಕಾಂಗ್ರೆಸ್ನವರು ಇದ್ದಾರೆ. ಪ್ರಕರಣದ ತನಿಖೆ ನಡೆದು ಕೊರ್ಟ್ನಲ್ಲಿದೆ. ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದರು.
ದರ ಹೆಚ್ಚಳ ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲ ಕಾಯಿಪಲ್ಯೆ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳವಾಗಲಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜಿವನ ದುಸ್ತರ ಆಗಿದೆ ಎಂದು ಆರೋಪಿಸಿದರು.