ಧಾರವಾಡ: ಮೊಬೈಲ್ ನಾವು ಇನ್ನೊಬ್ಬರನ್ನ ಸಂಪರ್ಕ ಮಾಡುವ ಸಾಧಮನ ಅಷ್ಟೇ ಅಲ್ಲಾ ನಮ್ಮ ವೈಯುಕ್ತಿಕ ಬದುಕು ಸಹ ಬಹುತೇಕ ಅದರಲ್ಲಿಯೇ ಅಡಗಿರುತ್ತದೆ. ಇಂದು ಮೊಬೈಲ್ ಇಲ್ಲದೇ ಬದುಕೇ ಇಲ್ಲ ಅನ್ನುವ ಮಟ್ಟಿಗೆ ಹೋಗಿದ್ದೇವೆ ನಾವು.ಆದರೆ ಜಂಜಾಟದ ಜೀವನದಲ್ಲಿ ಇಂದು ಮೊಬೈಲ್ ಫೋನ್ ಕಳೆದುಕೊಳ್ಳುವುದು ಸರ್ವೇ ಸಾಮಾನ್ಯ.
ಎಲ್ಲರ ಬಳಿ ಈಗ ಸ್ಮಾರ್ಟ್ ಫೋನ್ಗಳಿವೆ. ಇವು ಕಳೆದು ಹೋದ್ರೆ ಅವು ಎಲ್ಲಿ ಪತ್ತೆಯಾಗಬೇಕು ಬಿಡಿ ಎಂದು ಕೈಚೆಲ್ಲಿ ಕುಳಿತವರೇ ಹೆಚ್ಚು. ಆದರೆ, ಆ ರೀತಿ ಕಳ್ಳತನವಾದ ಸಾವಿರಾರು ಮೊಬೈಲ್ಗಳನ್ನು ಪತ್ತೆ ಮಾಡಿ ಮರಳಿ ಅವುಗಳನ್ನು ಫೋನ್ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಹುಬ್ಬಳ್ಳಿ, ಧಾರವಾಡ ಅವಳಿನಗರದ ಪೊಲೀಸರು ಜನಸ್ನೇಹಿ ಪೊಲೀಸರು ಎನಿಸಿಕೊಂಡಿದ್ದಾರೆ.
ಹೌದು! ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಕಳೆದು ಹೋದ ಮೊಬೈಲ್ಗಳನ್ನು ಪತ್ತೆ ಮಾಡಿದ್ದ ಪೊಲೀಸರು ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದರು. ಇದೀಗ ಧಾರವಾಡದಲ್ಲೂ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 70 ಮೊಬೈಲ್ಗಳನ್ನು ಪತ್ತೆ ಮಾಡಿ ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು ಮೊಬೈಲ್ ಕಳೆದುಕೊಂಡಿದ್ದವರಿಗೆ ಮರಳಿ ಅವರವರ ಮೊಬೈಲ್ಗಳನ್ನು ಹಸ್ತಾಂತರಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಅನೇಕರು ತಾವು ಕಳೆದುಕೊಂಡ ಮೊಬೈಲ್ಗಳು ಸಿಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಆದರೆ, ಆ ರೀತಿ ಕಳೆದುಕೊಂಡ ಮೊಬೈಲ್ಗಳು ಮಿಸ್ ಯೂಸ್ ಕೂಡ ಆಗುತ್ತವೆ.
ಕೆಲವರು ತಮ್ಮ ಮೊಬೈಲ್ ಸಿಗಬಹುದು ಎಂದು ದೂರು ಸಹ ಕೊಟ್ಟಿರುತ್ತಾರೆ. ಹೀಗೆ ದೂರು ಕೊಟ್ಟವರ ಮೊಬೈಲ್ಗಳು ಇದೀಗ ಪೊಲೀಸರ ಕಾರ್ಯಾಚರಣೆಯಿಂದ ಅವರ ಕೈಸೇರುತ್ತಿವೆ. ಒಟ್ಟಾರೆ ಅವಳಿನಗರದ ಪೊಲೀಸರು ತಿಂಗಳ ನಾಲ್ಕನೇ ಶನಿವಾರದಂದು ಈ ರೀತಿಯ ಕಾರ್ಯಕ್ರಮ ಮಾಡಿ ಮೊಬೈಲ್ ಕಳೆದುಕೊಂಡವರಿಗೆ ಮರಳಿ ಅವುಗಳನ್ನು ಹಸ್ತಾಂತರಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಾವು ಪೊಲೀಸರಿಗೆ ಒಂದು ಹ್ಯಾಟ್ಸ್ ಅಪ್ ಹೇಳಲೇಬೇಕು.