ತುಮಕೂರು: ವಿ ಸೋಮಣ್ಣ ಕೇಂದ್ರ ರೈಲ್ವೆ ಸಚಿವರಾದ ಬೆನ್ನಲ್ಲೆ ತುಮಕೂರಿಗೆ ಬೃಹತ್ ಅನುದಾನ ತಂದಿದ್ದಾರೆ, ಸುಮಾರು 350 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ರಿಡ್ಜ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಒಟ್ಟು ಐದು ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ತುಮಕೂರಿನ ಕ್ಯಾತಸಂದ್ರ ರೈಲ್ವೆ ಸ್ಟೇಷನ್ – ಮೈದಾಳ ಗೇಟ್ ಮೇಲ್ಸೇತುವೆ, ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಕಚೇರಿ ಬಳಿ ಮೇಲ್ಸೇತುವೆ, ಬಟವಾಡಿ ಗೇಟ್ ಮೇಲ್ಸೇತುವೆ, ಹರೆಯೂರು ರಸ್ತೆ, ಮಲ್ಲಸಂದ್ರ ಗೇಟ್ ಮೇಲ್ಸೇತುವೆ ನಿರ್ಮಾಣದ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲಾ ಯೋಜನೆ ಪೂರ್ಣಗೊಳಿಸುವ ಶಪಥ
ಇನ್ನು, ಮಧುಗಿರಿಯಲ್ಲಿ ಮಾತನಾಡಿದ್ದ ಸಚಿವ ಸೋಮಣ್ಣ ಅವರು, 2026ರ ವೇಳೆಗೆ ರಾಜ್ಯದ ಎಲ್ಲಾ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸೋಮಣ್ಣ ತಿಳಿಸಿದ್ದರು. ರೈಲ್ವೆ ಯೋಜನೆಗಳಿಗೆ ರಾಜ್ಯದಲ್ಲಿ ಹಲವು ವರ್ಷಗಳಿಂದ ಸ್ಥಳ ನೀಡುತ್ತಿಲ್ಲ. ಆದ್ದರಿಂದಲೇ ರೈಲ್ವೆ ಕಾಮಗಾರಿಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದೀನಿ, ಸಿಎಂ ಕೂಡ ಎಲ್ಲಾ ಕಂದಾಯ ಅಧಿಕಾರಿಗಳ ಜೊತೆ ಸೇರಿ ಅಗತ್ಯ ಸ್ಥಳವನ್ನು ನೀಡಲು ಸೂಚಿಸಿದ್ದಾರೆ ಎಂದು ತಿಳಿಸಿದ್ದರು.
ಚೆನ್ನೈ- ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ಸಂಚಾರ ಪ್ರಾರಂಭ
ಇನ್ನು ಇತ್ತೀಗೆಷ್ಟೇ ಚೆನ್ನೈ- ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ಸಂಚಾರ ಪ್ರಾರಂಭ ಆಗಿತ್ತು. ಈ ರೈಲು ಚೆನ್ನೈ-ಬೆಂಗಳೂರು- ತುಮಕೂರು-ಶಿವಮೊಗ್ಗ ಮಾರ್ಗದಲ್ಲಿ ಸಂಚಾರ ಮಾಡಲಿದ್ದು, ತುಮಕೂರು ರೈಲ್ವೇ ನಿಲ್ದಾಣ ತಲುಪಿದ ರೈಲಿಗೆ ಬಿಜೆಪಿ ಹಾಗೂ ಕನ್ನಡ ಸಂಘಟನೆ ಕಾರ್ಯಕರ್ತರ ಸ್ವಾಗತ ಕೋರಿ, ಹೂವಿನಿಂದ ಸಿಂಗಾರ ಮಾಡಿ ಸ್ವಾಗತ ಮಾಡಿದ್ದರು. ಇದೇ ವೇಳೆ ಕೇಂದ್ರ ಸಚಿವ, ಸಂಸದ ವಿ.ಸೋಮಣ್ಣಗೆ ಕಾರ್ಯಕರ್ತರು ಧನ್ಯವಾದ ತಿಳಿಸಿದ್ದರು.
ಇದೇ ವೇಳೆ ಮುಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಹಾಕುವ ಕನಸನ್ನು ಸೋಮಣ್ಣ ಅವರು ರಿವೀಲ್ ಮಾಡಿದ್ದರು. ಈ ಯೋಜನೆಯ ಜಾರಿಗೆ ಅಗತ್ಯ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದ ಸಚಿವರು, ಇದು ನನ್ನ ಕನಸು ಎಂದು ಹೇಳಿದ್ದಾರೆ. ಒಕ್ಕಲಿಗ ಸಮಯದಾಯ ಭವನದಲ್ಲಿ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸೋಮಣ್ಣ ಅವರು ಭಾಗಿಯಾಗಿದ್ದರು.