ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ 3’ಗೆ ತೆರೆಬಿದ್ದಿದೆ. ನಟ ಹುಲಿ ಕಾರ್ತಿಕ್ ಅವರು ಈ ಕಾರ್ಯಕ್ರಮದ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಟನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪುರವೇ ಹರಿದು ಬರುತ್ತಿದೆ.
‘ಗಿಚ್ಚಿ ಗಿಲಿಗಿಲಿ’ ಸೀಸನ್ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್ 10 ಲಕ್ಷ ರೂ.ಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿದ್ದಾರೆ. ಮಾನಸಾ 3 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ನನಗೆ ವಾಯ್ಸ್ ಬರುತ್ತಿಲ್ಲ. ನನ್ನ ತಾಯಿಗೆ ಥ್ಯಾಂಕ್ಸ್ ಹೇಳುತ್ತೇನೆ. ಆಕೆ ನನಗೆ ಕೊಟ್ಟ ಫ್ರೀಡಂ ಇದಕ್ಕೆಲ್ಲ ಕಾರಣ ಎಂದು ಕಾರ್ತಿಕ್ ಭಾವುಕರಾಗಿದ್ದಾರೆ.
‘ಬಿಗ್ ಬಾಸ್ 10’ರ ನಂತರ `ಗಿಚ್ಚಿ ಗಿಲಿಗಿಲಿ’ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಈ ಶೋ ಸುದೀರ್ಘವಾಗಿ ಮೂಡಿ ಬಂದಿತ್ತು. ಮಲೆನಾಡಿನ ಕಲಾವಿದ ಹುಲಿ ಕಾರ್ತಿಕ್ ಪ್ರಶಸ್ತಿ ಗೆಲ್ಲಲು 8 ವರ್ಷ ಕಾದಿದ್ದಾರೆ. ಮಜಾಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರ್ತಿಕ್, ಅಲ್ಲಿಂದ 8 ವರ್ಷದ ಬಳಿಕ ವಾಹಿನಿಯ ಕಾಮಿಡಿ ನಟನಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸುವ ಕಾರ್ತಿಕ್ ಮೂಲತಃ ಶಿವಮೊಗ್ಗದವರು. ತೀರ್ಥಹಳ್ಳಿಯ ಚಿಕ್ಕಳ್ಳಿ ಎಂಬ ಊರಿನವರು ಇವರಿಗೆ ತಾಯಿಯೇ ಪ್ರಪಂಚ. ಬಡತನದಲ್ಲಿ ಬೆಳೆದ ಕಾರ್ತಿಕ್ ಗಾರೆ ಕೆಲಸ, ಪಂಚರ್ ಶಾಪ್ ಹೀಗೆ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದಾರೆ. ಇನ್ನೂ ಕಾಮಿಡಿ ಶೋಗಳ ಜೊತೆಗೆ ಟಗರು ಪಲ್ಯ, ತ್ರಿವಿಕ್ರಮ ಮುಂತಾದ ಹಲವು ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ.