ಚೀನಾ: ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ಕೋವಿಡ್ 19 ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂಬ ಸಿದ್ಧಾಂತವನ್ನು ಚೀನಾದ ವಿಜ್ಞಾನಿಯೊಬ್ಬರು ನಿರಾಕರಿಸಿದ್ದು, ಈ ವೈರಸ್ ಮಾನವನಿಂದ ಹುಟ್ಟಿದ್ದು ಎಂದಿದ್ದಾರೆ.
ಬೀಜಿಂಗ್ ಯೂನಿವರ್ಸಿಟಿ ಆಫ್ ಕೆಮಿಕಲ್ ಟೆಕ್ನಾಲಜಿಯ ಟಾಂಗ್ ಯಿಗಾಂಗ್ , ವುಹಾನ್ನ ಹುವಾನಾನ್ ಸೀಫುಡ್ ಮಾರ್ಕೆಟ್ನಿಂದ ತೆಗೆದ ವೈರಲ್ ಮಾದರಿಗಳ ಆನುವಂಶಿಕ ಅನುಕ್ರಮಗಳು ಕೋವಿಡ್ ಸೋಂಕಿತ ರೋಗಿಗಳಿಗೆ ಬಹುತೇಕ ಒಂದೇ ಎಂದು ಹೇಳಿದ್ದು, ಮನುಷ್ಯರಿಂದಲೇ ಕೋವಿಡ್ ಹುಟ್ಟಿಕೊಂಡಿರಬಹುದು ಎಂದಿದ್ದಾರೆ.
ಚೀನೀ ಸ್ಟೇಟ್ ಕೌನ್ಸಿಲ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಾಂಗ್ ಯಿಗಾಂಗ್, ವಿಜ್ಞಾನಿಗಳು ಜನವರಿ 2020 ಮತ್ತು ಮಾರ್ಚ್ 2020 ರ ನಡುವೆ ವುಹಾನ್ ಮಾರುಕಟ್ಟೆಯಿಂದ 1,300 ಪರಿಸರ ಮತ್ತು ಹೆಪ್ಪುಗಟ್ಟಿದ ಪ್ರಾಣಿಗಳ ಮಾದರಿಗಳನ್ನು ತೆಗೆದುಕೊಂಡರು, ನಂತರ ಅವರು ಪರಿಸರದ ಮಾದರಿಗಳಿಂದ ವೈರಸ್ನ ಮೂರು ತಳಿಗಳನ್ನು ಪ್ರತ್ಯೇಕಿಸಿದರು.
ಕೋವಿಡ್ ವೈರಸ್ನ ಮೂಲವು ರಕೂನ್ ನಾಯಿಗಳು ಎಂದು ಸೂಚಿಸಿದ ಇತ್ತೀಚಿನ ಅಧ್ಯಯನವನ್ನು ವಿಜ್ಞಾನಿ ನಿರಾಕರಿಸಿದ್ದು, ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಶೋಧಕ ಝೌ ಲೀ, ಕೋವಿಡ್ ಅನ್ನು ಮೊದಲು ಪತ್ತೆ ಮಾಡಿದ ಸ್ಥಳವಾದ ವುಹಾನ್ ವೈರಸ್ ಹುಟ್ಟಿಕೊಂಡ ಸ್ಥಳವಾಗಿರಬೇಕಾಗಿಲ್ಲ ಎಂದಿದ್ದಾರೆ.