ಲಂಡನ್: ಸ್ಕಾಟ್ಲ್ಯಾಂಡ್ ಆಡಳಿತ ಪಕ್ಷದ ನೂತನ ನಾಯಕನಾಗಿ ಪಾಕ್ ಮೂಲದ ಹಂಝಾ ಯೂಸುಫ್ ಆಯ್ಕೆಯಾಗಿದ್ದಾರೆ.
ಹಂಝಾ ಯೂಸುಫ್ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ 55 ಲಕ್ಷ ಜನಸಂಖ್ಯೆಯ ಅರೆಸ್ವಾಯತ್ತ ರಾಷ್ಟ್ರವಾದ ಸ್ಕಾಟ್ಲ್ಯಾಂಡ್ನ ಪ್ರಧಾನಮಂತ್ರಿ ಸ್ಥಾನವನ್ನು ಆಲಂಕರಿಸಲಿರುವ ಪ್ರಪ್ರಥಮ ಬಿಳಿಜನಾಂಗಿಯೇತರ ವ್ಯಕ್ತಿ ಹಾಗೂ ಮುಸ್ಲಿಂ ಧರ್ಮೀಯ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಆಡಳಿತಾರೂಢ ಸ್ಕಾಟಿಶ್ ನ್ಯಾಶನಲ್ ಪಾರ್ಟಿ ನಾಯಕನ ಆಯ್ಕೆಗಾಗಿ ಪಕ್ಷದ ಸದಸ್ಯರೊಳಗೆ ಮತದಾನ ನಡೆದಿತ್ತು. ಯೂಸುಫ್ ಅವರು ತನ್ನ ಎದುರಾಳಿ ಕೇಟ್ ಫೋರ್ಬ್ಸ್ ಅವರನ್ನು ಅಲ್ಪ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಪ್ರಧಾನಿ ಮಂತ್ರಿ ಪಟ್ಟ ಅಂಕರಿಸಿದರು.
ಸ್ಕಾಟ್ಲ್ಯಾಂಡ್ ನ ಗ್ಲಾಸ್ಗೊದಲ್ಲಿ ಪಾಕ್ ಮೂಲದ ವಲಸಿಗ ದಂಪತಿಗೆ ಜನಿಸಿದ್ದ ಯೂಸುಫ್ ಹಾಲಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಹಾಲಿ ಪ್ರಧಾನಮಂತ್ರಿ ನಿಕೋಲಾ ಸ್ಟುರ್ಜಿಯೊನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯೂಸುಫ್ ಸೇರಿದಂತೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು.
ಸ್ಕಾಟ್ಲ್ಯಾಂಡ್ ಸರಕಾರದ ಪ್ರಧಾನ ಮಂತ್ರಿಯಾಗಿ ಮತ್ತು ಸ್ಕಾಟಿಶ್ ನ್ಯಾಶನಲ್ ಪಾರ್ಟಿಯ ನಾಯಕಿಯಾಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ನಿಕೋಲಾ ಅವರು ಕಳೆದ ತಿಂಗಳು ಅನಿರೀಕ್ಷಿತವಾಗಿ ರಾಜೀನಾಮೆ ಸಲ್ಲಿಸಿದ್ದರು. ಇದೀಗ ನಿಕೋಲಾ ಅವರಿಂದ ತೆರೆವಾದ ಸ್ಥಾನಕ್ಕೆ ಯೂಸುಫ್ ಆಯ್ಕೆಯಾಗಿದ್ದಾರೆ.
60 ವರ್ಷಗಳ ಹಿಂದೆ ಪಾಕಿಸ್ತಾನದ ಪಂಜಾಬ್ ಪ್ರಾಂತದಿಂದ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೊಗೆ ವಲಸೆ ಬಂದ ತನ್ನ ದಿವಂಗತ ತಾತ ಹಾಗೂ ಅಜ್ಜಿ ಅವರಿಗೆ ಈ ಸಂದರ್ಭದಲ್ಲಿ ಯೂಸುಫ್ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.