ಕಳೆದ ಕೆಲ ತಿಂಗಳುಗಳಿಂದ ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ಮಣಿಸಲು ಅಲ್ಲಿನ ಸರಕಾರ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಅಲ್ಲಿನ ಕಟ್ಟಾ ಮುಸ್ಲಿಂ ಮೂಲಭೂತವಾದಿಗಳು ಹೆಣ್ಣು ಮಕ್ಕಳನ್ನು ಭಯಭೀತರನ್ನಾಗಿಸುವ ಮೂಲಕ ಅವರನ್ನು ಶಾಲೆಗಳಿಂದ ದೂರವುಳಿಯುವಂತೆ ಮಾಡಲು ವಿಷ ಉಣಿಸುವಂತಹ ಅಮಾನವೀಯ ಕೃತ್ಯಕ್ಕೆ ಕೈಹಾಕಿದ್ದಾರೆ.
ಶಾಲೆಗಳಿಗೆ ತೆರಳುತ್ತಿರುವ ಬಾಲಕಿಯರಿಗೆ ಅವರ ಅರಿವಿಗೆ ಬಾರದಂತೆ ಅಲ್ಪಪ್ರಮಾಣದಲ್ಲಿ ವಿಷಪ್ರಾಶನ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದ್ದು ಇದರಿಂದ ನೂರಾರು ಸಂಖ್ಯೆಯಲ್ಲಿ ಬಾಲಕಿಯರು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವಂತಾಗಿದೆ.
ಮೂಲಭೂತವಾದಿಗಳ ಈ ಅಮಾನವೀಯ ನಡೆಗೆ ಇರಾನ್ ಮಾತ್ರವಲ್ಲದೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಾಲಕಿಯರಿಗೆ ವಿಷಪ್ರಾಶನ ಮಾಡಲಾಗುತ್ತಿರುವ ಮಾಹಿತಿಯನ್ನು ಇರಾನ್ನ ಆರೋಗ್ಯ ಖಾತೆಯ ಉಪ ಸಚಿವರೇ ದೃಢಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದಲ್ಲಿ ಹೆಣ್ಣು ಮಕ್ಕಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದ್ದು ಶಾಲಾ-ಕಾಲೇಜುಗಳಿಗೆ ತೆರಳುವ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಕಳೆದ ವರ್ಷದ ನವೆಂಬರ್ನಿಂದೀಚೆಗೆ ದೇಶಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರ ಸಹಿತ ಹೆಣ್ಣುಮಕ್ಕಳು ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಪ್ರತಿಭಟನಕಾರರು ಮತ್ತು ಅವರ ಬೆಂಬಲಿಗರ ವಿರುದ್ಧ ನಿರ್ದಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವವರನ್ನು ಬಂಧಿಸಿ ಕಾರಾಗೃಹಗಳಲ್ಲಿ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆಯಲ್ಲದೆ ಕೆಲವರು ಪೊಲೀಸರ ವಶದಲ್ಲಿರುವಾಗಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್ನೂ ಕೆಲವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಮೂಲಕ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಜನರು ಪಾಲ್ಗೊಳ್ಳದಂತೆ ಬೆದರಿಸುವ ತಂತ್ರವನ್ನೂ ಅನುಸರಿಸಲಾಗುತ್ತಿದೆ.