ಅಮೆರಿಕದ ಆಗ್ನೇಯ ದಿಕ್ಕಿನಲ್ಲಿ ಸಂಭವಿಸಿದ ಹೆಲೆನ್ ಚಂಡಮಾರುತದಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹಲವು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ. ಘಟನೆಯಲ್ಲಿ ಇದುವರೆಗೂ 130 ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಫ್ಲೋರಿಡಾ, ಉತ್ತರ ಕೆರೊಲಿನಾ, ವರ್ಜೀನಿಯಾ ಮತ್ತು ಟೆನ್ನೆಸ್ಸಿಯಲ್ಲಿ ಸಾವುಗಳು ಸಂಭವಿಸಿವೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಉತ್ತರ ಕೆರೊಲಿನಾದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ. ಸಲೂಡಾ ಕೌಂಟಿಯ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 25 ಮಂದಿ ಅಸುನೀಗಿದ್ದಾರೆ.
ಜಾರ್ಜಿಯಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಅಲಾಮೊದಲ್ಲಿ ಸುಂಟರಗಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಬ್ರಿಯಾನ್ ಕೆಂಪ್ ಅವರ ವಕ್ತಾರರು ತಿಳಿಸಿದ್ದಾರೆ. ಉತ್ತರ ಕೆರೊಲಿನಾದ ಬಂಕೊಂಬ್ ಕೌಂಟಿಯು ಆನ್ಲೈನ್ ಫಾರ್ಮ್ ಮೂಲಕ ಸುಮಾರು 600 ಕಾಣೆಯಾದ ಜನರ ಮಾಹಿತಿ ಪಡೆದಿದೆ ಎಂದು ಕೌಂಟಿ ಮ್ಯಾನೇಜರ್ ಅವ್ರಿಲ್ ಪಿಂಡರ್ ಭಾನುವಾರ ಹೇಳಿದರು.
ಚಂಡಮಾರುತ ಪೀಡಿತ ಸಮುದಾಯಗಳಿಗೆ ಅಗತ್ಯ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಆಡಳಿತ ವ್ಯವಸ್ಥೆ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ.
‘ಎಕ್ಸ್’ ಪೋಸ್ಟ್ನಲ್ಲಿ ಬರೆದುಕೊಂಡಿರುವ ಬೈಡನ್, ‘ಹೆಲೆನ್ ಚಂಡಮಾರುತದಿಂದ ನಲುಗಿರುವ ಜನರ ರಕ್ಷಣೆ ಹಾಗೂ ಕಾರ್ಯಾಚರಣೆಯ ಪ್ರಯತ್ನಗಳ ಕುರಿತು ಮಾಹಿತಿ ನೀಡುತ್ತಿರುತ್ತೇನೆ. ನಿರಾಶ್ರಿತರಿಗೆ ಅಗತ್ಯವಿರುವ ಬೆಂಬಲ ಮತ್ತು ಸಂಪನ್ಮೂಲಗಳನ್ನು ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ನನ್ನ ಆಡಳಿತ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಮನೆಗಳನ್ನು ಕಳೆದುಕೊಂಡವರಿಗಾಗಿ ಜಿಲ್ (ಬೈಡನ್ ಪತ್ನಿ) ಮತ್ತು ನಾನು ಪ್ರಾರ್ಥಿಸುತ್ತಿದ್ದೇವೆ’ ಎಂದಿದ್ದಾರೆ.