ಜೂನಿಯರ್ ಎನ್ಟಿಆರ್ ಹಾಗೂ ಜಾನ್ವಿ ಕಪೂರ್ ಕಾಂಬಿನೇಷನ್ ನ ಬಹು ನಿರೀಕ್ಷಿತ ದೇವರ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕೊನೆ ಕ್ಷಣದಲ್ಲಿ ರದ್ದಾಗಿದೆ. ಕೆಲವೇ ಸಾವಿರ ಜನರು ನಡೆಯುವ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದರಿಂದ ಅದನ್ನು ಕ್ಯಾನ್ಸಲ್ ಮಾಡಲಾಯಿತು. ಭಾರೀ ರಾದ್ದಾಂತ ನಡೆದಿದ್ದರಿಂದ ಬಂದ ಸೆಲೆಬ್ರಿಟಿಗಳು ತೊಂದರೆ ಅನುಭವಿಸಬೇಕಾಯಿತು. ಘಟನೆ ಬಗ್ಗೆ ನಟ ಜೂನಿಯರ್ ಎನ್ಟಿಆರ್ ಪ್ರತಿಕ್ರಿಯಿಸಿದ್ದಾರೆ.
‘ದೇವರ ಈವೆಂಟ್ ಕ್ಯಾನ್ಸಲ್ ಆಗಿದೆ ಎಂದು ತಿಳಿದು ಬೇಸರ ಆಯಿತು. ಈ ಇವೆಂಟ್ಗಾಗಿ ನಾನು ಕಾದಿದ್ದೆ. ನಾನು ನಿಮ್ಮೊಂದಿಗೆ ಸಮಯ ಕಳೆಯಲು ಮತ್ತು ದೇವರ ಬಗ್ಗೆ ಅನೇಕ ಆಸಕ್ತಿದಾಯಕ ವಿವರಗಳನ್ನು ಹಂಚಿಕೊಳ್ಳಲು ಕಾದಿದ್ದೆ. ಈ ಸಿನಿಮಾಗಾಗಿ ಹಾಕಿದ ಶ್ರಮದ ಬಗ್ಗೆ ತಿಳಿಸಲು ಕಾದಿದ್ದೆ. ಆದರೆ, ಭದ್ರತೆಯ ಕಾರಣದಿಂದ ಈ ಕಾರ್ಯಕ್ರಮ ನಡೆಯಲಿಲ್ಲ. ನಿಮಗಿಂತ ಹೆಚ್ಚು ನೋವು ನನಗೆ ಆಗಿದೆ. ಈ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದಕ್ಕೆ ನಿರ್ಮಾಪಕರು ಹಾಗೂ ಸಂಘಟಕರನ್ನು ಬಯ್ಯೋದು ತಪ್ಪು’ ಎಂದಿದ್ದಾರೆ.
‘ದೇವರ’ ಈವೆಂಟ್ಗೆ ಫ್ಯಾನ್ಸ್ ಕಾದಿದ್ದರು. ಕಳೆದ ಆರು ವರ್ಷಗಳಲ್ಲಿ ಜೂನಿಯರ್ ಎನ್ಟಿಆರ್ ಸೋಲೋ ಹೀರೋ ಆಗಿ ನಟಿಸಿದ ಸಿನಿಮಾ ಇದು. ಈ ಸಿನಿಮಾ ಮಾಡುವಾಗ ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಈಗ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವಾಗ ಈ ರೀತಿ ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
‘ದೇವರ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಕೆಲವೇ ಸಾವಿರ ಜನರು ಸೇರಬಹುದಾದ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ 15ರಿಂದ 20 ಸಾವಿರ ಜನರು ನೆರೆದಿದ್ದರು. ಎಲ್ಲರಿಗೂ ಜಾಗ ಸಿಗದ ಕಾರಣ ವಿಐಪಿ ಅತಿಥಿಗಳಿಗೆ ಮೀಸಲಾಗಿದ್ದ ಕುರ್ಚಿಗಳತ್ತ ಕೆಲವರು ನುಗ್ಗಿದರು. ಇದರಿಂದ ಸಾಕಷ್ಟು ತೊಂದರೆ ಆಗಿ ಕಾರ್ಯಕ್ರಮ ರದ್ದು ಮಾಡಲಾಯಿತು.