ಬೆಂಗಳೂರು: ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅವರ ಪರಿಕಲ್ಪನೆ ಮತ್ತು ಕನಸುಗಳ ಕಾರಣದಿಂದಾಗಿ ನಾನು ಭಾರತೀಯ ಜನತಾ ಪಕ್ಷವನ್ನು ಸೇರುತ್ತಿದ್ದೇನೆ ಎಂದಿದ್ದಾರೆ ನಟಿ, ಸಂಸದೆ ಸುಮಲತಾ ಅಂಬರೀಶ್ ಇಂದು ಅವರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಸೇರಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಪತ್ರ ನೀಡಿ ಸುಮಲತಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಡಿ.ವಿ ಸದಾನಂದಗೌಡ , ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಮುನಿರತ್ನ, ಮಾಜಿ ಮಂತ್ರಿ ಕೆ.ಸಿ.ನಾರಾಯಣ ಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸುಮಲತಾ ಅಂಬರೀಶ್ ಅವರ ಜೊತೆಗೆ ಕ್ರಿಕೆಟಿಗ ದೊಡ್ಡಗಣೇಶ್ ಸೇರಿದಂತೆ ಸಾಕಷ್ಟು ಮುಖಂಡರುಗಳು ಇಂದು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಸೇರಿದ ನಂತರ ಮಾತನಾಡಿದ ಸುಮಲತಾ ಅಂಬರೀಶ್, ಇವತ್ತಿನ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದುಕೊಂಡ ಸುದಿನ. ಐದು ವರ್ಷಗಳ ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ ಎಂದೆಂದೂ ಮರೆಯಲ್ಲ. ಆ ಚುನಾವಣೆ ದೊಡ್ಡ ಶಕ್ತಿ ಕೊಡ್ತು, ಸಾಕಷ್ಟು ಜನ ಬೆಂಬಲಿಸಿದರು. ಬಿಜೆಪಿಯವರೂ ಬಾಹ್ಯ ಬೆಂಬಲ ಕೊಟ್ಟಿದ್ರು. ಐದು ವರ್ಷದ ಹಿಂದೆ ಮೋದಿಯವ್ರು ಮಂಡ್ಯಕ್ಕೆ ಬಂದಿದ್ರು. ಅವರೂ ನನ್ನ ಪರ ಮತ ಕೇಳಿ ಜನರ ಸಹಕಾರ ಕೇಳಿದ್ರು, ಇದನ್ನ ನಾನು ಎಂದೆಂದೂ ಮರೆಯಲ್ಲ ಎಂದರು.
ಮುಂದುವರೆದು ಮಾತನಾಡಿದ ಸುಮಲತಾ, ಈ ಐದು ವರ್ಷಗಳ ಪ್ರಯಾಣದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಬಿಜೆಪಿಯ ಸಾಕಷ್ಟು ಹಿರಿಯರ ಬೆಂಬಲ, ಸಹಕಾರ ಸಿಕ್ಕಿದೆ, ಎಲ್ಲರಿಗೂ ಧನ್ಯವಾದ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಾಕಷ್ಟು ಸಹಕಾರ ಕೊಟ್ರು. ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಸಮಸ್ಯೆ ಏನಿದೆ ಹೇಳಿ, ಸರಿಪಡಿಸೋಣ ಅಂದ್ರು. ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ ಕೆಲಸ ಆಯ್ತು. ಬೊಮ್ಮಾಯಿ ಐವತ್ತು ಕೋಟಿ ಕೊಟ್ರು. ಇವತ್ತು ಮೈಶುಗರ್ ಪುನಶ್ಚೇತನಕ್ಕೆ ಯಾರ್ಯಾರೋ ಕ್ರೆಡಿಟ್ ತಗೊಳ್ತಿದ್ದಾರೆ ಮೈಶುಗರ್ ಮರುಚಾಲನೆ ಕ್ರೆಡಿಟ್ ಬಿಜೆಪಿಗೆ ಸೇರುತ್ತೆ ಎಂದರು.