ಬೆಂಗಳೂರು, ಜನವರಿ 09: ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಹವಾ ಇರಲಿದೆ. ಕಾಂಗ್ರೆಸ್ಸಿಗೂ ಅದು ಅನುಭವಕ್ಕೆ ಬರಲು ಆರಂಭವಾಗಿದೆ. ಕೆಲವು ತಿಂಗಳ ಹಿಂದೆ ನಾನೂ ಎಂ.ಪಿ. ಕ್ಯಾಂಡಿಡೇಟ್ ಎನ್ನುತ್ತಿದ್ದ ಕಾಂಗ್ರೆಸ್ಸಿನ ಸಚಿವರು, ಈಗ ನನಗೆ ಬೇಡ, ನನಗೆ ಬೇಡ ಎನ್ನಲಾರಂಭಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಅವರಿಗೂ ಇನ್ನೇನಿದ್ದರೂ ಮೋದಿಜೀ ಹವಾ ಎಂದು ಅರಿವಾಗಿದೆ. ನಾವು ಇರೋದನ್ನು ಉಳಿಸಿಕೊಂಡರೆ ಸಾಕೆಂಬ ಚಿಂತೆಯಲ್ಲಿ ಅವರಿದ್ದಾರೆ ಎಂದು ಹೇಳಿದರು.
ನಾವು ಪೂರ್ಣ ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಗೆಲ್ಲಲಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಸಂಕಲ್ಪ ನಮ್ಮದು ಎಂದು ತಿಳಿಸಿದರು. ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಎಂಬುದನ್ನು ಎನ್ಡಿಎ ಸಮಿತಿ ನಿರ್ಧರಿಸಲಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಸಂಬಂಧ ರಾಜ್ಯ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಮತ್ತು ಬೂತ್ ಮಟ್ಟದಲ್ಲಿ ಚಟುವಟಿಕೆ ನಡೆಸಲಿದ್ದೇವೆ. ಪ್ರತಿ ಬೂತ್ನಲ್ಲಿ ಶೇ 51ಕ್ಕಿಂತ ಹೆಚ್ಚು ಮತ ಗಳಿಕೆ ಕಡೆಗೆ ತಂತ್ರಗಾರಿಕೆ ರೂಪಿಸಲಿದ್ದೇವೆ ಎಂದು ತಿಳಿಸಿದರು.