ಕಲಬುರಗಿ: ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ಅಲ್ಲ ನಾನು. ನನ್ನನ್ನು ಯಾರೂ ಕೆಣಕಲ್ಲ, ಕೆಣಕಿದ್ರೆ ಉತ್ತರ ಕೊಡದೆ ಬಿಡುವುದಿಲ್ಲ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ಗೆ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು. ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ನನಗೆ ಒಂದು ಕಿವಿಮಾತು ಹೇಳಿದ್ದಾರೆ. ಒಬ್ಬನೇ ಮಗ ಇದ್ದೀಯಾ, ಧೈರ್ಯದಿಂದ ಇರು ಎಂದಿದ್ದಾರೆ. ಕಳೆದ 53 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ನಾನು ಚಿಕ್ಕವನಿದ್ದಾಗ ತಾಯಿ, ತಂಗಿ, ಚಿಕ್ಕಪ್ಪನನ್ನು ಕಳೆದುಕೊಂಡೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದರು.
ರಾಜ್ಯ ಅಭಿವೃದ್ಧಿಯಾಗಬೇಕಂದ್ರೆ 40% ಸರ್ಕಾರ ತೆಗೆಯಬೇಕು. ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಅಂತ ಪ್ರಧಾನಿ ಮೋದಿ ಕೇಳುತ್ತಾರೆ. ನಾವು 70 ವರ್ಷ ಏನು ಮಾಡದಿದ್ರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ದೇಶದ ಸ್ವತಂತ್ರ್ಯಕ್ಕಾಗಿ ಆರ್ಎಸ್ಎಸ್, ಬಿಜೆಪಿ ಹೋರಾಟ ಮಾಡಿಲ್ಲ ಎಂದರು.
ಆರ್ಎಸ್ಎಸ್ನವರು ಸರ್ಕಾರಿ ನೌಕರಿ, ಒಳ್ಳೊಳ್ಳೆ ಹುದ್ದೆಗೆ ಹೋದರು. ಆದರೆ ಸಾಮಾನ್ಯ ಜನರು ಸ್ವತಂತ್ರ ಕ್ಕಾಗಿ ಹೋರಾಟ ಮಾಡಿದರು. ದಿನಕ್ಕೆ ನಾಲ್ಕು ನಾಲ್ಕು ಜಾಕೇಟ್ ಪ್ರಧಾನಿ ಹಾಕುತ್ತಾರೆ. ಮೋದಿ ಅವರ ಜಾಕೇಟ್ ಮಾತ್ರ ಪ್ರಸಿದ್ಧಿಯಾಗಿದೆ. ಕೇವಲ ಕಾಂಗ್ರೆಸ್ಗೆ ಬೈದ್ರೆ ದೇಶದ ಅಭಿವೃದ್ಧಿಯಾಗುತ್ತಾ ಎಂದು ಪ್ರಶ್ನಿಸಿದರು.
ನಾನು ಕರ್ನಾಟಕ, ಕಲಬುರಗಿ ಮಗನಿದ್ದೇನೆ. ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ಕರ್ನಾಟಕ ಜನರು ನನಗೆ ಮತ ನೀಡಬೇಕು. ಮೋದಿ ಗುಜರಾತ್ನಿಂದ ಬಂದು ಹೇಗೆ ಇಲ್ಲಿ ಸುಪುತ್ರರಾಗುತ್ತಾರೆ. ಮೋದಿ ಗಲ್ಲಿಗಲ್ಲಿಗೆ ಬಂದು ಅಡ್ಡಾಡುತ್ತಿದ್ದಾರೆ. ಅವರಿಗೆ ಸೋಲಿನ ನಡುಕ ಹುಟ್ಟಿದೆ. ಒಬ್ಬ ಪ್ರಧಾನ ಮಂತ್ರಿ ಪ್ರಚಾರಕ್ಕೆ ಇಷ್ಟೊಂದು ಸಲ ಬರೋದಾ ಎಂದು ಕಿಡಿಕಾರಿದರು.