ಮಂಡ್ಯ: ತಮಗೆ ಕೇಂದ್ರದಲ್ಲಿ ಕೃಷಿ ಖಾತೆ ಕೈತಪ್ಪಿದ್ದಕ್ಕೆ ಜೆಡಿಎಸ್ ರಾಜ್ಯಾದ್ಯಕ್ಷ ಎಚ್ಡಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
“ನಿಮ್ಮೆಲ್ಲರ ಆಸೆಯಂತೆ ನಾನು ಕೇಂದ್ರ ಕೃಷಿ ಸಚಿವನಾಗುವ ಭರವಸೆ ಇತ್ತು. ಆದರೆ ಆ ಖಾತೆ ನನಗೆ ಸಿಗಲಿಲ್ಲ. ಇದರ ಬಗ್ಗೆ ನನಗೆ ನೋವು ಇದೆ” ಎಂದು ಅವರು ಹೇಳಿದರು.
“ರಾಜ್ಯದಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ರೈತರ ಆತ್ಮಹತ್ಯೆ ಪ್ರಕರಣಗಳನ್ನು ನೋಡಿದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಇದನ್ನು ಕಂಡು ನನಗೆ ಅತೀವ ದುಃಖ ಉಂಟಾಗಿದೆ. ರಾಜ್ಯದಲ್ಲಿ ಸರ್ಕಾರವು ರೈತರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಬದಲಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೇಂದ್ರದಲ್ಲಿ ಕೃಷಿ ಮಂತ್ರಿ ಆಗಬಹುದು ಎಂಬ ಆಸೆ ಇತ್ತು. ಆದರೆ ನಾನು ಕೃಷಿ ಸಚಿವ ಆಗುವುದು ಸಾಧ್ಯವಾಗಲಿಲ್ಲ. ಇವತ್ತು ನನಗೆ ನೋವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಒಂದೂವರೆ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಇದು ನನ್ನ ಮನಸ್ಸಿಗೆ ಆಗಿರುವ ನೋವು. ನಾನು ಈ ಹಿಂದೆಯೂ ಹೇಳಿದ್ದೆ, ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅಧಿಕಾರಕ್ಕೆ ಬಂದ ನಂತರ ರೈತರ ನೆರವಿಗೆ ಬರ್ತೀನಿ ಎಂದು. ಅದಕ್ಕೆ ಬದ್ಧನಾಗಿದ್ದೇನೆ” ಎಂದು ಹೇಳಿದರು.