ಚಿಕ್ಕೋಡಿ: ಜಗದೀಶ್ ಶೆಟ್ಟರ್ (Jagadish Shettar) ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರನ್ನು ಸೋಲಿಸುವ ಹೊಣೆ ನನ್ನದು ಎಂದು ಮಾಜಿ ಸಿಎಂ ಯಡಿಯೂರಪ್ಪ (B.S.Yediyurappa) ಅಥಣಿಯಲ್ಲಿ ಅಬ್ಬರಿಸಿದ್ದಾರೆ.
ನಗರದ ಶಿವಯೋಗಿ ದೇವಸ್ಥಾನದ ಮೈದಾನದಲ್ಲಿ ನಡೆದ ಬಿಜೆಪಿ (BJP) ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನೂ ವಿಧಾನ ಪರಿಷತ್ ಅವಧಿ 5 ವರ್ಷ 2 ತಿಂಗಳು ಇದ್ದರೂ ಸಹ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಎಲ್ಲಾ ಅಧಿಕಾರ ಅನುಭವಿಸಿಯೂ ಶೆಟ್ಟರ್ ಬಿಜೆಪಿ ತೊರೆದಿದ್ದಾರೆ. ಇಲ್ಲಿ ಶೆಟ್ಟರ್ ಅವರನ್ನು ಸೋಲಿಸುವ ಜವಬ್ದಾರಿ ನನ್ನದು, ಲಕ್ಷ್ಮಣ ಸವದಿ (Laxman Savadi) ಅವರನ್ನು ಸೋಲಿಸುವ ಜವಾಬ್ದಾರಿ ನಿಮ್ಮದು ಎಂದು ಜನರಿಗೆ ಕರೆ ನೀಡಿದ್ದಾರೆ.
10 ಸಾವಿರ ಜನ ಉರಿ ಬಿಸಿಲಿನಲ್ಲಿ ಸೇರುತ್ತಾರೆ ಎಂದು ನನಗೆ ನಂಬಿಕೆ ಇರಲಿಲ್ಲ. ಇಷ್ಟೊಂದು ಜನ ಸೇರಿದ್ದಾರೆ ಎಂದರೆ ಈ ಬಾರಿ ಚುನಾವಣೆಯಲ್ಲಿ (Election) ಸವದಿ ಸೋಲುವುದು ಖಚಿತ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಬಿಜೆಪಿ 130 ಕ್ಕೂ ಹೆಚ್ಚು ಸೀಟು ಪಡೆದು ಸರ್ಕಾರ ರಚಿಸುವುದು ಅಷ್ಟೇ ಸತ್ಯ. 25 ರಿಂದ 30 ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಗೆಲ್ಲಲಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ
ಕಾಂಗ್ರೆಸ್ (Congress) ಮುಳುಗುತ್ತಿರುವ ಹಡಗು, ಉತ್ತರ ಪ್ರದೇಶದಲ್ಲಿ ನಾಲ್ಕೋ ಐದೋ ಸಿಟ್ ಗೆದ್ದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಮುಂದೆ ಸಮ ಆಗಲು ಸಾಧ್ಯವೇ ಎಂದು ಕುಟುಕಿದ್ದಾರೆ.