ಜೈಪುರ: ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ-ಆಫ್ಸ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 112 ರನ್ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಪ್ಲೇಆಫ್ಸ್ಗೆ ಇನ್ನಷ್ಟು ಸನಿಹವಾಯಿತು.
ಕೇವಲ 11 ಎಸೆತಗಳಲ್ಲಿ 29 ರನ್ ಸಿಡಿಸಿದ್ದ ಅನುಜ್ ರಾವತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಕೆಂಡ್ನಲ್ಲಿ ರನ್ ವೇಗ ಹೆಚ್ಚಿಸಿದ್ದರು. ಇದರ ಫಲವಾಗಿ ಆರ್ಸಿಬಿ ತನ್ನ ಪಾಲಿನ 20 ಓವರ್ಗಳಿಗೆ 171 ರನ್ಗಳಿಸಲು ನೆರವಾಗಿದ್ದರು. ಇದರ ಜೊತೆಗೆ ವಿಕೆಟ್ ಕೀಪಿಂಗ್ನಲ್ಲಿಯೂ ಅವರು ಸಂಜು ಸ್ಯಾಮ್ಸನ್ ಅವರ ಅದ್ಭುತ ಕ್ಯಾಚ್ ಹಾಗೂ ಆರ್ ಅಶ್ವಿನ್ ಅವರನ್ನು ಎಂಎಸ್ ಧೋನಿ ಅವರ ರೀತಿ ರನ್ ಔಟ್ ಮಾಡಿದ್ದರು.
ಆರ್ಸಿಬಿ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನುಜ್ ರಾವತ್, “ನಾನು ನೆಟ್ಸ್ನಲ್ಲಿ ಯಾವ ರೀತಿ ಅಭ್ಯಾಸ ಮಾಡುತ್ತೇನೆ, ಅದೇ ರೀತಿ ಇದೀಗ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ ಅಷ್ಟೆ. ನಾನು ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದರೆ, ಖಚಿತವಾಗಿಯೂ ಪಂದ್ಯದ ಮೇಲೆ ಪ್ರಾಬಲ್ಯ ಮೆರೆಯಬಹುದು ಎಂದು ಕ್ರೀಸ್ಗೆ ಬಂದಾಗ ಯೋಚಿಸಿದ್ದೆ. ಇದನ್ನೇ ನಾನು ಇಂದು (ಭಾನುವಾರ) ಮಾಡಿದ್ದೇನೆ,” ಎಂದರು.
ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡ ನೆಟ್ ರನ್ರೇಟ್ ಕಡಿಮೆ ಇತ್ತು. ಆದರೆ, ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಪಡೆದ ಫಲವಾಗಿ ಬೆಂಗಳೂರು ತಂಡದ ರನ್ರೇಟ್ (+0.166) ಹೆಚ್ಚಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, ಇದು ತಂಡದ ಪಾಲಿಗೆ ಒಳ್ಳೆಯ ಸಂಗತಿ ಎಂದರು.
“ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಮ್ಮ ತಂಡದ ನೆಟ್ ರನ್ರೇಟ್ ಋಣಾತ್ಮಕವಾಗಿತ್ತು. ಆದರೆ, ಈ ಇವತ್ತಿನ ಗೆಲುವಿನ ಮೂಲಕ ನಮ್ಮ ತಂಡದ ರನ್ರೇಟ್ ಪಾಸಿಟಿವ್ ಆಗಿದೆ. ಎರಡು ಅಂಕಗಳ ಜೊತೆಗೆ ರನ್ರೇಟ್ ನಮ್ಮ ಪಾಲಿಗೆ ಒಳ್ಳೆಯದಾಗಿದೆ. ಒಂದೊಂದು ಪಂದ್ಯವನ್ನು ಪರಿಗಣಿಸಿ ಆಡಲು ಪ್ರಯತ್ನಿಸುತ್ತೇವೆ,” ಎಂದು ಹೇಳಿದ್ದಾರೆ.
ಆರ್ಆರ್ ಈ ರೀತಿ ಸೋಲುತ್ತದೆಂದು ನಿರೀಕ್ಷಿಸಿರಲಿಲ್ಲ
ರಾಜಸ್ಥಾನ್ ರಾಯಲ್ಸ್ ತಂಡ ದೊಡ್ಡ ಅಂತರದಲ್ಲಿ ಸೋತ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಜ್ ರಾವತ್, “ಇದು ಕ್ರಿಕೆಟ್ ಆಗಿರುವ ಕಾರಣ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ನಿಜವಾಗಲೂ ಚೆನ್ನಾಗಿ ಆಡಿಕೊಂಡು ಬರುತ್ತಿದೆ. ಆದರೆ, ನಮ್ಮ ವಿರುದ್ಧ ಅವರು ಈ ರೀತಿ ದೊಡ್ಡ ಅಂತರದಲ್ಲಿ ಸೋಲಬಹುದೆಂದು ನಾವು ನಿರೀಕ್ಷಿಸಿರಲಿಲ್ಲ. ಕ್ರಿಕೆಟ್ನಲ್ಲಿ ಯಾವುದೇ ದಿನ ಏನು ಬೇಕಾದರೂ ನಡೆಯಬಹುದು. ಆದರೆ, ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದೇವೆ,” ಎಂದು ತಿಳಿಸಿದ್ದಾರೆ.