ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್ ನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೊ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಂಗ್ ಚುಕ್ ಅವರು ಮೋದಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಮೋದಿ ಈ ಪ್ರಶಸ್ತಿ ಪಡೆದುಕೊಂಡ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮೋದಿ, ಭೂತಾನ್ ನ ಅತ್ಯುನ್ನತ ನಾಗರಿಕ ಗೌರವ ‘ ಆರ್ಡರ್ ಆಫ್ ದಿ ಗ್ಯಾಲ್ಪೊ’ ಪ್ರಶಸ್ತಿ ಸ್ವೀಕರಿಸಲು ನನಗೆ ಸಂತಸವಾಗಿದೆ. ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಅವರು ಥಿಂಪುವಿನಲ್ಲಿ ಪ್ರಧಾನಿ ಮೋದಿ ಅವರಿಗಾಗಿ ಭೋಜನಕೂಟ ಆಯೋಜಿಸಿದ್ದು, ಈ ವೇಳೆ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳು ಮಾಡಿಕೊಂಡವು. ಅದರಲ್ಲೂ ಮುಖ್ಯವಾಗಿ ಭಾರತ ಮತ್ತು ಭೂತಾನ್ ದೇಶಗಳ ನಡುವೆ ಶುಕ್ರವಾರ ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ಕ್ಷೇತ್ರಗಳ ನಡುವಿನ ವಿನಿಯಮದ ಒಪ್ಪಂದ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ಪ್ರವಾಸದಲ್ಲಿದ್ದು ಅಲ್ಲಿ ಅವರು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲೂ ಗಮನ ಸೆಳೆದಿದ್ದು ಉಭಯ ದೇಶಗಳ ನಡುವೆ ರೈಲು ಸಂಪರ್ಕ ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆ. ಈ ಮೂಲಕ ನೆರೆಯ ದೇಶಗಳ ನಡುವೆ ರೈಲು ಸಂಚಾರ ಆರಂಭವಾಗಲಿದೆ.
2021ರ ಡಿಸೆಂಬರ್ 17 ರಂದು ಭೂತಾನ್ ನ 114ನೇ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿತ್ತು.