ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎನ್ ಕುಮಾರ್ ನಡುವಿನ ಆರೋಪ, ಪ್ರತ್ಯಾರೋಪದ ವಿಚಾರಕ್ಕೆ ಕೊನೆಗೂ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಕೊಟ್ಟಿದ್ದಾರೆ. ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಇದೀಗ ರವಿಚಂದ್ರನ್ ಎಂಟ್ರಿಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟ ರವಿಚಂದ್ರನ್, ‘ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು.
ಈ ಕುರಿತು ಸುದೀಪ್ ಹತ್ತಿರ ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯ್ಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೆಲವೊಂದು ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.