ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಆಗಿದ್ದನ್ನು ನಾನು ಸಮರ್ಥಿಸುವುದಿಲ್ಲ. ಅವರ ವಿರುದ್ಧ ಆಕ್ಷನ್ ತಗೋಬೇಕು, ಜೈಲಿಗೆ ಹಾಕಬೇಕು. ಎಲ್ಲಾ ರೀತಿಯ ಶಿಕ್ಷೆ ಆಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಇದ್ದಾಗ 6 ಕಡೆ ಸರಣಿ ಬಾಂಬ್ ಬ್ಲಾಸ್ಟ್ ಆಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ, ಮಲ್ಲೇಶ್ವರದಲ್ಲಿ, ವಿಮಾನ ನಿಲ್ದಾಣದಲ್ಲಿ, ಮಂಗಳೂರಿನಲ್ಲಿ. ಬಿಜೆಪಿ ಸರ್ಕಾರ ಇದ್ದಾಗ ಬ್ಲಾಸ್ಟ್ ಆಗಿದ್ದವು ಎಂದು ಕುಟುಕಿದರು.
ಬಿಜೆಪಿಗೆ ಕಂಪೇರ್ ಮಾಡಿದ್ರೆ ಬಾಂಬ್ ಬ್ಲಾಸ್ಟ್, ಕ್ರಿಮಿನಲ್ ಆಕ್ಟಿವಿಟಿ ನಮ್ಮ ಅವಧಿಯಲ್ಲಿ ಬಹಳ ಕಡಿಮೆ ಆಗಿದೆ. ಮುಂದೆ ಸಂಪೂರ್ಣ ನಿಯಂತ್ರಣ ಮಾಡುತ್ತೇವೆ. ಪೊಲೀಸರಿಗೆ ಏನು ಕೆಲಸ ಮಾಡಬೇಕು ಗೊತ್ತಿದೆ. ಬಿಜೆಪಿಯವರನ್ನೆಲ್ಲ ಕೇಳಿಕೊಂಡು ಕೆಲಸ ಮಾಡಬೇಕಾ? ತನಿಖೆಯಲ್ಲಿ ಎಷ್ಟು ಜನ ಇದಾರೆ ಗೊತ್ತಾಗುತ್ತೆ. ನಾನೇನು ತನಿಖಾಧಿಕಾರಿನಾ? ಘೋಷಣೆ ಕೂಗಿಲ್ಲ ಅಂತ ಯಾರು ಹೇಳಿದ್ರೋ ಅವರನ್ನು ಕೇಳಿ ಎಂದು ಗರಂ ಆದರು.