ಮಂಡ್ಯ:– ಮಂಡ್ಯದಲ್ಲಿ ನಡೆದ ಬೀಗರ ಔತಣ ಕೂಟದ ಬಗ್ಗೆ ಮಾತನಾಡಲು ಅಭಿಷೇಕ್ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅಂದುಕೊಂಡಂತೆ ಕಾರ್ಯಕ್ರಮ ಯಶಸ್ವಿಯಾಗಿದೆ ಆದರೆ ಎಲ್ಲೋ ಕೆಲವರು ಮಾಡಿದ ತಪ್ಪಿನಿಂದ ನಾವು ಊಟದ ವ್ಯವಸ್ಥೆಯನ್ನು ಬೇಗನೆ ಮುಗಿಸಬೇಕಾಯ್ತು. ಬಹುತೇಕ ಎಲ್ಲರಿಗೂ ಊಟ ಸಿಕ್ಕಿದೆ ಆದರೆ ಊಟ ಸಿಗದೆ ತೊಂದರೆ ಪಟ್ಟವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದರು.
ನಾನು ಯಾರನ್ನೂ ದೂಷಿಸುವುದಿಲ್ಲ. ನಾವು ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸುಮಾರು 250 ಮಂದಿ ಪೊಲೀಸರು ಸಹ ಸ್ಥಳದಲ್ಲಿ ನಿಯೋಜನೆಗೊಂಡು ಜನರನ್ನು ನಿಯಂತ್ರಿಸಿದರು. ಹಾಗಿದ್ದರೂ ಸಹ ಎಲ್ಲೋ ಕೆಲವು ಮಂದಿ ನಿಯಂತ್ರಣ ತಪ್ಪಿದರು. ಅಥವಾ ಅವರನ್ನು ಕೆಲವರು ಪ್ರಚೋದಿಸಿದ್ದರಿಂದಲೋ ಏನೋ ಅವರು ಅಡುಗೆ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಅದರಿಂದಾಗಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟರು ಹಾಗೂ ಮಹಿಳೆಯರು ಗಾಬರಿಯಾಗಿಬಿಟ್ಟರು. ಇದರಿಂದ ಅಡುಗೆ ಬಡಿಸುವುದು ಸಹ ತಡವಾಗಿಬಿಟ್ಟಿತು. ಕಾರಣಗಳನ್ನು ಎಷ್ಟೆ ಹೇಳಿದರು ಸಣ್ಣ ಮಟ್ಟಿನ ಸಮಸ್ಯೆ ಆಗಿರುವುದಂತೂ ನಿಜವಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ವಿಶಾಲ ಹೃದಯ ಪ್ರದರ್ಶಿಸಿದರು ಅಭಿಷೇಕ್.
ಊಟದ ಕೊರತೆ ಆಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತೋರಿಸಿದರು ಆದರೆ ಅದು ಸುಳ್ಳು. ಖಂಡಿತ ಆಹಾರದ ಕೊರತೆ ಆಗಿರಲಿಲ್ಲ. ಇನ್ನೂ ಸಾಕಷ್ಟು ಆಹಾರ ಇತ್ತು. ದೊಡ್ಡ ಕಾರ್ಯಕ್ರಮ ಮಾಡಿದಾಗ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಆಗುತ್ತವೆ, ಬಡಿಸುವುದರಲ್ಲಿ ತುಸು ತಡವಾಗಿದೆ ಆದರೆ ಅದನ್ನೇ ಇಟ್ಟುಕೊಂಡು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಜನ ತುಸು ಉದ್ರೇಕಕ್ಕೆ ಒಳಗಾದರು ಎನಿಸುತ್ತದೆ. ಆದರೆ ಅವರದ್ದು ತಪ್ಪಲ್ಲ. ಹೊಟ್ಟೆ ಹಸಿದಾಗ ತಾಳ್ಮೆ ಕಳೆದುಕೊಳ್ಳುವುದು ಸಹಜ” ಎಂದರು ಅಭಿಷೇಕ್