ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಕಳೆದ ಕೆಲ ತಿಂಗಳುಗಳಿಂದ ತಮ್ಮ ರಿಲೇಷನ್ ಶಿಪ್ ಕುರಿತಾಗಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇಬ್ಬರು ತಮ್ಮ ಸಂಬಂಧದ ಕುರಿತು ಬಹಿರಂಗವಾಗಿಯೇ ಮಾತನಾಡುತ್ತಿದ್ದು ಈ ಮಧ್ಯೆ ತಮ್ಮದೇ ರಿಯಲ್ ಲೈಫ್ ಸ್ಟೋರಿಯನ್ನ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.
ಇತ್ತೀಚೆಗೆ ಸಿಕ್ಸ್ತ್ ಸೆನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ‘ಆಕಾಶ ಬಿದ್ದರೂ, ಭೂಮಿ ಬಾಯ್ತೆರೆದರೂ ಒಟ್ಟಿಗೆ ಇರ್ತೆವೆ’ ಎಂದು ಹೇಳಿಕೊಂಡಿದ್ದಾರೆ. ಪ್ರೀತಿಯಿಂದ ಪವಿತ್ರಾ ಲೋಕೇಶ್ ಅವರನ್ನು ತಾವು ‘ಅಮ್ಮು’ ಎಂದು ಕರೆಯುವುದಾಗಿ ನರೇಶ್ ತಿಳಿಸಿದ್ದಾರೆ. ಈ ಮೂಲಕ ತಾವು ಇಬ್ಬರೂ ರಿಲೇಶನ್ ಶಿಪ್ ನಲ್ಲಿ ಇರುವುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಈ ಹಿಂದೆ ಪವಿತ್ರಾ ಲೋಕೇಶ್ ಜೊತೆಗಿನ ಸ್ನೇಹಕ್ಕೆ ನರೇಶ್ ತಮ್ಮದೇ ಆದಂತಹ ವ್ಯಾಖ್ಯಾನ ನೀಡಿದ್ದರು. ತಮ್ಮ ಲವ್ ಸ್ಟೋರಿ ಆಧರಿಸಿದ ‘ಮತ್ತೆ ಮದುವೆ’ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ನರೇಶ್, ‘ಎರಡು ಹೃದಯಗಳು ಒಂದಾಗುವುದೇ ಮದುವೆ’ ಎಂದು ಹೇಳಿದ್ದರು. ಮದುವೆ ವ್ಯವಸ್ಥೆ ಹಾಳಾಗಿ ಹೋಗಿದೆ. ಫ್ಯಾಮಿಲಿ ಕೋರ್ಟ್ ಸಂಖ್ಯೆ ಹೆಚ್ಚಾಗಿವೆ ಎಂದರೆ ಮದುವೆ ಕುರಿತು ಯೋಚಿಸಬೇಕಿದೆ ಎಂದಿದ್ದರು ನರೇಶ್.
ಇಂತಹ ಮಾತುಗಳನ್ನು ಆಡುವ ಮೂಲಕ ಪವಿತ್ರಾ ಲೋಕೇಶ್ ಜೊತೆಗಿನ ಬಾಂಧವ್ಯವನ್ನು ಒಪ್ಪಿಕೊಂಡಿದ್ದರು. ಮದುವೆ ಅಂದರೆ, ತಾಳಿ ಕಟ್ಟಲೇಬೇಕು ಅಂತೇನೂ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಎರಡು ಹೃದಯಗಳು ಬೆರತ ಮೇಲೆ ಅದುವೇ ಮದುವೆ ಎಂದು ಹೇಳುವ ಮೂಲಕ ಪವಿತ್ರಾ ಲೋಕೇಶ್ ಮತ್ತು ತಮ್ಮದು ಯಾವ ರೀತಿಯ ಸಂಬಂಧವೆಂದು ಅವರು ವಿವರಿಸಿದ್ದರು.