ಮಂಡ್ಯ :- ಮದ್ದೂರು ವಿಧಾನ ಸಭೆ ಚುನಾವಣೆಗೆ ಕಳೆದ 10 ಹಿಂದೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.70ರಷ್ಟು ಈಡೇರಿಸಿದ್ದೇನೆ. ಈ ಬಾರಿ ನಮ್ಮ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲಿದ್ದು ಇನ್ನುಳಿದ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಡಿ.ಸಿ.ತಮ್ಮಣ್ಣ ಭರವಸೆ ನೀಡಿದರು. ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೆಜ್ಜಲಗೆರೆ, ಕುದುರಗುಂಡಿ, ಸಾದೊಳಲು, ಬೋರಾಪುರ, ಹುಲಿಗೆರೆಪುರ, ನಗರಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ನಾನು ಕಿರುಗಾವಲು ಕ್ಷೇತ್ರದಿಂದ ಮದ್ದೂರು ಕ್ಷೇತ್ರಕ್ಕೆ ಆಗಮಿಸಿದ ವೇಳೆ ಕ್ಷೇತ್ರವು ಹಲವು ಸಮಸ್ಯೆಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದಿತ್ತು. ಕಳೆದ ಚುನಾವಣೆಯಲ್ಲಿ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇದರ ಜೊತೆಗೆ, ವಸತಿ ಶಾಲೆಗಳು, ಐಟಿಐ, ಪದವಿ ಕಾಲೇಜು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ ಸೇರಿದಂತೆ ವಿವಿಧ ಕ್ಷೇತ್ರದ ಜನರ ಭರವಸೆಗಳನ್ನು ಈಡೇರಿಸಿದ್ದೇನೆ ಎಂದರು.
ಜಲಸಂಪನ್ಮೂಲ, ಸಣ್ಣ ನೀರಾವರಿ, ಶಿಕ್ಷಣ ಇಲಾಖೆ, ಆರೋಗ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ, ಹಿಂದುಳಿದ ವರ್ಗಗಳ ಇಲಾಖೆ, ವಿದ್ಯುತ್, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಕೋಟ್ಯಾಂತರ ರೂಪಾಯಿಗಳ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಜಿ.ಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಮಾತನಾಡಿ, ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳು ಬೋಗಸ್ ಆಗಿವೆ. ಚುನಾವಣೆಗೆಂದೆ ಕೈ ನಾಯಕರು ಈ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಈಗಾಗಲೇ ಛತ್ತೀಸ್ ಗಢದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಇಂತಹ ಘೋಷಣೆಗಳನ್ನು ಮಾಡಿ ಅಧಿಕಾರಕ್ಕೆ ಬಂದಿದೆ. ಆದರೆ, ಅಧಿಕಾರಕ್ಕೆ ಬಂದು 3 ವರ್ಷಗಳಾಗಿದ್ದು, ಯಾವುದೇ ಘೋಷಣೆ ಮಾಡದೆ ಜನರಿಗೆ ಮಂಕು ಬೂದಿ ಎರಚಿದ್ದಾರೆ ಎಂದು ಕಿಡಿಕಾರಿದರು.ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ ಮುಲ್ ಮಾಜಿ ನಿರ್ದೇಶಕ ಉಮೇಶ್ ಮುಖಂಡರಾದ ಕುದರಗುಂಡಿ ನಾಗರಾಜ್, ಚಾಮರಾಜ್, ಮಹದೇವು, ಸುಂದರ್, ಪುನೀತ್, ಪುಟ್ಟಣ್ಣ, ಎಂ.ಸಿ.ಸಿದ್ದು ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ