ರಾಯಚೂರು:ನನ್ನ ವಿರುದ್ಧ ದಿಲ್ಲಿ ನಾಯಕರಿಗೆ ದೂರು ಹೋಗಿದೆ ಎಂದರೆ ನಾನು ಅಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದರ್ಥ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಅದಲ್ಲದೇ ನಮ್ಮದು ರಾಷ್ಟ್ರೀಯ ಪಕ್ಷ ಯಾರೋ ಅಪ್ಪನ ಮಗ, ಅಣ್ಣನ ಮಗಳ ಅಂತ ಯಾರಿಗೂ ಟಿಕೆಟ್ ತೀರ್ಮಾನ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಹತೆಯ ಆಧಾರದಲ್ಲಿ ಯಾರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೋ ಅಂಥವರಿಗೆ ಟಿಕೆಟ್ ನೀಡಿದರೇ ಪಕ್ಷಕ್ಕೆ ಒಳ್ಳೆಯದು ಆಗುತ್ತೆ ಎಂಬುದು ಹಿರಿಯರಿಗೆ ಗೊತ್ತಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರು ಒಪ್ಪಿಕೊಳ್ತಾರಾ, ಗೆಲುವಿನ ಸಂಭಾವ್ಯತೆ ಸೇರಿ ವಿವಿಧ ಮಾನದಂಡಗಳ ಆಧಾರದಲ್ಲಿ ಹಿರಿಯ ನಾಯಕರು ಟಿಕೆಟ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ತಾರೆ ಎಂದು ಹೇಳಿದರು.
ಪಾಪ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕಿ ಅಲೆಯುವಂಥ ಸ್ಥಿತಿ ಬರಬಾರದಿತ್ತು. ಮುಂದಿನ ಮುಖ್ಯಮಂತ್ರಿ ಆಗ್ಬೇಕು ಅನ್ಕೊಂಡಿರುವ ಮಹಾನ್ ನಾಯಕರಿಗೆ ಇಂತಹ ಸ್ಥಿತಿ ನಿರ್ಮಾಣ ಆಗಿರೋದು ಹಾಸ್ಯಾಸ್ಪದ ಎಂದು ಸಿರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ಯಾರೋ ಅಪ್ಪನ ಮಗ, ಅಣ್ಣನ ಮಗ ಅಂತ ಯಾರಿಗೂ ವಿಧಾನಸಭಾ ಟಿಕೆಟ್ ತೀರ್ಮಾನ ಮಾಡಲ್ಲ ಎಂದರು.
ವಿ ಸೋಮಣ್ಣ ಹೈಕಮಾಂಡ್ಗೆ ದೂರು ನೀಡಿರುವ ವಿಚಾರಕ್ಕೆ ಮಾತನಾಡಿ, ನನ್ನ ವಿರುದ್ಧ ಯಾರು ದೂರು ಕೊಟ್ಟಿದ್ದಾರೋ ಗೊತ್ತಿಲ್ಲ. ದೆಹಲಿ ನಾಯಕರಿಗೆ ದೂರು ಹೋಗಿದೆ ಅಂತಾದರೇ, ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಅಂತ ಅರ್ಥ. ಸೋಮಣ್ಣ ಹಿರಿಯ ನಾಯಕರಿದ್ದಾರೆ. ಅವರೇನೇ ಮಾತನಾಡಿದ್ರೂ ಆಶೀರ್ವಾದ ಅಂತ ಸ್ವೀಕರಿಸುತ್ತೇನೆ. ಅದಕ್ಕೇನು ಬೇಸರವಿಲ್ಲ ಎಂದು ವಿಜಯೇಂದ್ರ ಹೇಳಿದರು.