ಬೆಂಗಳೂರು: ಬೊಮ್ಮಾಯಿಯಷ್ಟು ಜನಪರ ಸಿಎಂ ನಾನು ನೋಡಿಯೇ ಇಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ಸಂಬಂಧ ಗೋವಿಂದರಾಜ ನಗರದಲ್ಲಿ ಮಾತನಾಡಿದ ಅವರು, ಇಷ್ಟು ವರ್ಷದಲ್ಲಿ ನನ್ನ ಬಹುದೊಡ್ಡ ಗೆಳೆಯ ಅಂದರೆ ಬೊಮ್ಮಾಯಿ. ನಾನು ಏಳೆಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ತಂದೆ ಜೊತೆಗೂ ಕೆಲಸ ಮಾಡಿದ್ದೇನೆ. ಆದರೆ ಬೊಮ್ಮಾಯಿಯಷ್ಟು ಜನಪರ ಸಿಎಂ ನಾನು ನೋಡಿಯೇ ಇಲ್ಲ ಎಂದು ಹೇಳುವ ಮೂಲಕ ಸೋಮಣ್ಣ ಅವರು ಬೊಮ್ಮಾಯಿಯನ್ನು ಹಾಡಿ ಹೊಗಳಿದರು.
ಇತ್ತೀಚೆಗಷ್ಟೇ ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದಿಯಲ್ಲಿದ್ದ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ಬಳಿಕ ಅಮಿತ್ ಶಾ, ಸಿಎಂ ಬೊಮ್ಮಾಯಿ, ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಸೋಮಣ್ಣ ಅವರ ಮನವೋಲಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಕಂಡಿದ್ದರು. ನಂತರ ತಾನು ಎಲ್ಲಿಯೂ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಎಂದು ಸೋಮಣ್ಣ ಹೇಳಿದ್ದರು. ಇದೀಗ ಸಿಎಂ ಬೊಮ್ಮಾಯಿ ಅವರನ್ನು ಹೊಗಳುವ ಮೂಲಕ ಬಿಜೆಪಿ ಇರುವುದಾಗಿ ಖಚಿತಪಡಿಸಿದ್ದಾರೆ.