ಟೋಬಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಎಲ್ಲ ಕಡೆಗೆ ಸಂಚಲನ ಮೂಡಿಸಿದೆ. ರಾಜ್ ಬಿ ಶೆಟ್ಟಿ ಅವರು ಮತ್ತೊಮ್ಮೆ ಮೋಡಿ ಮಾಡೋದಕ್ಕೆ ರೆಡಿ ಆಗಿದ್ದಾರೆ. ಅಂದಹಾಗೆ, ಈ ಸಿನಿಮಾಗೆ ಕಥೆ ಬರೆದಿರುವುದು ಟಿ ಕೆ ದಯಾನಂದ್. ಚಿತ್ರದ ಟ್ರೇಲರ್ ಲಾಂಚ್ ವೇಳೆ ಮಾತನಾಡಿದ ದಯಾನಂದ್, ಈ ಸಿನಿಮಾದ ಕಥೆಯನ್ನು ಮೊದಲು ಹೇಳಿದ್ದೇ ಡಾ ಪುನೀತ್ ರಾಜ್ಕುಮಾರ್ ಅವರಿಗೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಆದರೆ ‘ಟೋಬಿ’ ಕಥೆಯನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಒಂದಷ್ಟು ನೀಡಿದ್ದರು. ಆ ಬಗ್ಗೆ ಟಿ ಕೆ ದಯಾನಂದ್ ಮಾತನಾಡಿದ್ದಾರೆ.
ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಸಂಸ್ಥೆ ನಡೆಸುವ ಕಥಾ ಸ್ಪರ್ಧೆಯಲ್ಲಿ ನಾನು ಬರೆದಿದ್ದ ಈ ‘ಟೋಬಿ’ ಕಥೆಯನ್ನೂ ಕಳಿಸಿದ್ದೆ. ಅಲ್ಲಿ 3.73 ಲಕ್ಷಕ್ಕೂ ಅಧಿಕ ಕಥೆಗಳು ಬಂದಿದ್ದವು. ಆಯುಷ್ಮಾನ್ ಖುರಾನಾ, ಕುಬ್ರಾ ಸೇಠ್, ರಾಜ್ಕುಮಾರ್ ರಾವ್ ಮತ್ತು ತಮನ್ನಾ ಭಾಟಿಯಾ ಈ ಕಥಾ ಸ್ಪರ್ಧೆಯ ಜಡ್ಜ್ ಆಗಿದ್ದರು. ನನಗೆ ಅವಾರ್ಡ್ ಬರಲ್ಲ ಎಂದುಕೊಂಡೇ ನಾನು ಅಂದಕೊಂಡಿದ್ದೆ. ಲಕ್ಷಾಂತರ ಕಥೆಗಳ ಮಧ್ಯೆ ‘ಟೋಬಿ’ ಕಥೆ ಆಯ್ಕೆಯಾಗಿ, ಅದಕ್ಕೆ ಪ್ರಶಸ್ತಿ ಬಂತು. ಆಗ ತಮನ್ನಾ ಅವರು, ‘ನೀನು ಈ ಕಥೆಯನ್ನು ಯಾಕೆ ಬರೆದೆಯೋ, ಏನಕ್ಕೆ ಬರೆದೆಯೋ ನನಗೆ ಗೊತ್ತಿಲ್ಲ. ಆದರೆ ಇದು ನನ್ನನ್ನು ತುಂಬ ಡಿಸ್ಟರ್ಬ್ ಮಾಡ್ತು’ ಎಂದಿದ್ದರು. ಆ ಟೋಬಿ ಎಲ್ಲರಿಗೂ ಡಿಸ್ಟರ್ಬ್ ಮಾಡ್ತಾನೆ’ ಅಂತ ಟಿಕೆ ದಯಾನಂದ ಅವರು ತಿಳಿಸಿದ್ದಾರೆ.
‘ಈ ಟೋಬಿಯನ್ನು ಸಿನಿಮಾ ಕಥೆಯಾಗಿ ಹೇಳಬಹುದಾ ಎಂದುಕೊಂಡೆ. ಅದಕ್ಕೆ ತಕ್ಕಂತೆ ಬರೆದುಕೊಂಡೆ. ನಾನು ಈ ಕಥೆಯನ್ನು ಮೊದಲು ಹೇಳಿದ್ದು ನಟ ಪುನೀತ್ ರಾಜ್ಕುಮಾರ್ ಅವರಿಗೆ. ‘ಒಂದು ಸಲ ಆಫೀಸ್ಗೆ ಬನ್ನಿ, ಮಾತಾಡಬೇಕಿದೆ’ ಎಂದು ಅಪ್ಪು ಸರ್ ಕರೆದಿದ್ದರು. ‘ಗ್ರಾಮಾಯಣ’ ಸಿನಿಮಾ ನಿರ್ದೇಶಕ ದೇವನೂರು ಚಂದ್ರು ಮತ್ತು ನಾನು ಅವರ ಆಫಿಸ್ಗೆ ಹೋಗಿದ್ದೆವು. ನಾನು ಟೋಬಿ ಕಥೆಯನ್ನು ಅಪ್ಪು ಸರ್ಗೆ ಹೇಳಿದೆ.. ಆಗ ಅಲ್ಲಿ ಅಶ್ವಿನಿ ಮೇಡಂ ಕೂಡ ಇದ್ರು’ ಎಂದು ಟಿಕೆ ದಯಾನಂದ ಹೇಳಿದ್ದಾರೆ.