ತಮ್ಮ ಜನಾಂಗೀಯ ಪರಂಪರೆ ಪ್ರಶ್ನಿಸಿದ ಅಮೆರಿಕದ ಮಾಜಿ ಅಧ್ಯಕ್ಷ ಪ್ರಸ್ತುತ 2024ರ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ಗೆ ತಿರುಗೇಟು ಕಮಲಾ ಹ್ಯಾರಿಸ್ ತಿರುಗೇಟು ನೀಡಿದ್ದಾರೆ. ನಾನು ಜಿಲ್ಲಾ ಅಟಾರ್ನಿ, ಅಟಾರ್ನಿ ಜನರಲ್ ಮತ್ತು ಕೋರ್ಟ್ರೂಮ್ ಪ್ರಾಸಿಕ್ಯೂಟರ್ ಆಗಿದ್ದಾಗ ‘ಎಲ್ಲ ರೀತಿಯ ದುಷ್ಕರ್ಮಿಗಳನ್ನು ನೋಡಿದ್ದೇನೆ’ ಮತ್ತು ಆ ರೀತಿಯ(ಡೊನಾಲ್ಡ್ ಟ್ರಂಪ್) ವ್ಯಕ್ತಿಗಳನ್ನು ನಿಭಾಯಿಸುತ್ತಲೇ ಬಂದಿದ್ದೇನೆ ಎಂದು ಹೇಳಿದ್ದಾರೆ.
‘ನಿಮ್ಮಲ್ಲಿ ಬಹಳ ಜನರಿಗೆ ತಿಳಿದಿದೆ. ನಾನು ಸೆನೆಟರ್ ಆಗಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ನಾನು ಚುನಾಯಿತ ಅಟಾರ್ನಿ ಜನರಲ್ ಮತ್ತು ಚುನಾಯಿತ ಜಿಲ್ಲಾ ಅಟಾರ್ನಿಯಾಗಿದ್ದೆ. ಅದಕ್ಕೂ ಮುನ್ನ, ಪ್ರಾಸಿಕ್ಯೂಟರ್ ಆಗಿದ್ದೆ’ ಎಂದು ಕಮಲಾ ಹ್ಯಾರಿಸ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
‘ಹಾಗಾಗಿ, ಆ ಎಲ್ಲ ಹುದ್ದೆಗಳನ್ನು ನಿರ್ವಹಿಸಿರುವ ನಾನು ಮಹಿಳೆಯರನ್ನು ನಿಂದಿಸುವ ಪರಭಕ್ಷಕರು, ವಂಚಕರು, ತಮ್ಮ ಲಾಭಕ್ಕಾಗಿ ನಿಯಮಗಳನ್ನು ಉಲ್ಲಂಘಿಸಿದವರು ಮುಂತಾದ ಎಲ್ಲ ರೀತಿಯ ದುಷ್ಕರ್ಮಿಗಳನ್ನು ನೋಡಿದ್ದೇನೆ. ನನಗೆ ಡೊನಾಲ್ಡ್ ಟ್ರಂಪ್ ಅವರಂತಹ ವ್ಯಕ್ತಿಗಳ ಬಗ್ಗೆ ತಿಳಿದಿದೆ. ನಾನು ಅವರಂತಹ ವ್ಯಕ್ತಿಗಳನ್ದು ನಿಭಾಯಿಸಿದ್ದೇನೆ’ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಅವರ ಜನಾಂಗೀಯ ಪರಂಪರೆಯನ್ನು ಪ್ರಶ್ನಿಸಿದ ಬಳಿಕ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ ಕಾವು ಪಡೆದುಕೊಂಡಿದೆ. ಭಾರತ ಮೂಲದವರಾದ ಆಕೆ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯ ಮಹಿಳೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
‘ಪರೋಕ್ಷವಾಗಿ ಅವರ(ಕಮಲಾ ಹ್ಯಾರಿಸ್) ಬಗ್ಗೆ ಬಲ್ಲೆ. ಅವರು ಯಾವಾಗಲೂ ತಮ್ಮನ್ನು ಭಾರತೀಯ ಮೂಲದವರೆಂದೇ ಗುರುತಿಸಿಕೊಳ್ಳುತ್ತಿದ್ದರು. ಆಕೆ ಕಪ್ಪುವರ್ಣೀಯ ಮಹಿಳೆ ಎಂದು ಹಲವು ವರ್ಷಗಳಿಂದ ನನಗೆ ಗೊತ್ತಿರಲಿಲ್ಲ. ಈಗ ಅವರು ಕಪ್ಪುವರ್ಣೀಯಳೆಂದು ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಹಾಗಾಗಿ, ಅವರು ಭಾರತೀಯರೋ? ಕಪ್ಪುವರ್ಣೀಯರೋ? ನನಗೆ ಗೊತ್ತಿಲ್ಲ ‘ ಎಂದು ಷಿಕಾಗೊದಲ್ಲಿ ಕಪ್ಪುವರ್ಣೀಯ ಪತ್ರಿಕೋದ್ಯಮಿಗಳ ರಾಷ್ಟ್ರೀಯ ಸಂಘದ ಸಮ್ಮೇಳನದಲ್ಲಿ ಟ್ರಂಪ್ ಹೇಳಿದ್ದರು.