ಮೈಸೂರು: ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವರುಣಾದಲ್ಲಿ (Varuna) ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಈಗಾಗ್ಲೆ ಲಿಂಗಾಯತ ಚೀಫ್ ಮಿನಿಸ್ಟರ್ ಇದ್ದಾರಲ್ಲಾ ಅವ್ರೇ, ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು ಎಂದು ಹೇಳಿಕೆ ನೀಡಿದ್ದರು. ತಾವು ಮಾತನಾಡಿದ್ದಂತಹ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತೆ ಎಂಬುದನ್ನು ಅರಿತ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಲಿಂಗಾಯತರೆಲ್ಲ (Lingayat Community) ಭ್ರಷ್ಟರೆಂದು ನಾನು ಹೇಳಿದ್ದೇನೆಂದು ತೋರಿಸಲು ಮಾಡುತ್ತಿರುವ ಪ್ರಯತ್ನ ರಾಜಕೀಯ ದುರುದ್ದೇಶದಿಂದ ಕೂಡಿದ್ದು. ಆ ರೀತಿ ನಾನು ಹೇಳಿಯೇ ಇಲ್ಲ ಎಂದಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ನಾನು ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ, ಲಿಂಗಾಯತರು ಭ್ರಷ್ಟರು ಎಂದು ಎಲ್ಲಿಯೂ ಹೇಳಿಲ್ಲ. ಇದನ್ನು ವರದಿ ಮಾಡಿರುವುದು ಸರಿಯಾಗಿಲ್ಲ ಅಂತ ಹೇಳಿದ್ದಾರೆ. ಲಿಂಗಾಯತರಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲರು ಇವರೆಲ್ಲ ಪ್ರಾಮಾಣಿಕರಾಗಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟರಿದ್ದಾರೆ ಎಂದು ಹೇಳಿದ್ದೆ.