ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A)ದಲ್ಲಿ ತಾನು ಯಾವುದೇ ಹುದ್ದೆಯನ್ನು ಬಯಸುವುದಿಲ್ಲ ಎಂದು ಬಿಹಾರದ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಪುನರುಚ್ಚರಿಸಿದ್ದಾರೆ. ನಾನು ಏನನ್ನೂ ಬಯಸುವುದಿಲ್ಲ. ಇದನ್ನು ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ನನಗೆ ಅಂತಹ ಆಸೆ ಇಲ್ಲ. ನಾನು ಎಲ್ಲರನ್ನೂ ಒಗ್ಗೂಡಿಸಲು ಬಯಸುತ್ತೇನೆ ಎಂದು ಪಾಟ್ನಾದಲ್ಲಿ ತಮ್ಮ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಹೇಳಿದ್ದಾರೆ.
ಸಂಚಾಲಕನ ಪಾತ್ರವನ್ನು ನೀಡಿದರೆ ಸ್ವೀಕರಿಸುತ್ತೀರಾ ಎಂದು ಕೇಳಿದಾಗ, ಹಮ್ಕೊ ಕುಚ್ ನಹೀ ಬನ್ನಾ ಹೈ. ಹುಮಾರಿ ಕೋಯಿ ಇಚ್ಚಾ ನಹೀ ಹೈಂ. ದೂಸ್ರೆ ಲೋಗೋ ಕೋ ಬನಾಯಾ ಜಾಯೇಗಾ (ನನಗೆ ಏನೂ ಆಗಲು ಇಷ್ಟವಿಲ್ಲ. ನನಗೆ ಅಂತಹ ಯಾವುದೇ ಆಸೆ ಇಲ್ಲ. ಇತರರನ್ನು ಸಂಚಾಲಕರನ್ನಾಗಿ ಮಾಡಲಾಗುವುದು) ಎಂದು ಅವರು ಹೇಳಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಕ್ರಮದ ನೇತೃತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ, ನನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ. ನಾನು ಪಕ್ಷಗಳನ್ನು ಒಗ್ಗೂಡಿಸಲು ಮಾತ್ರ ಬಯಸುತ್ತೇನೆ ಎಂದಿದ್ದಾರೆ.
ಭಾರತ ನಿಜವಾಗಿಯೂ 1947 ರಲ್ಲಿ ಸ್ವತಂತ್ರವಾಗಲಿಲ್ಲ, ಆದರೆ ಜೆಪಿ ಚಳುವಳಿಯ ನಂತರ 1977 ರಲ್ಲಿ ಆಗಿದ್ದು ಎಂದು ಬಿಹಾರದ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, ಯಾರಾದರೂ ಹೇಳಿದರೆ ನಾನು ಯಾವುದಕ್ಕೂ ಗಮನ ಕೊಡುವುದಿಲ್ಲ. ಸ್ವಾತಂತ್ರ್ಯದ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದಾದರೆ ಅವರು ಎಷ್ಟು ಅಪ್ರಸ್ತುತರು ಎಂಬುದನ್ನು ಅದು ತೋರಿಸುತ್ತದೆ ಎಂದಿದ್ದಾರೆ.