ಈ ಬಾರಿಯ ಐಪಿಎಲ್ 2023 ರಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆದಿವೆ. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜಗಳದಿಂದ ಹಿಡಿದು ಆವೇಶ್ ಖಾನ್ ಕೋಪದಲ್ಲಿ ಹೆಲ್ಮೆಟ್ ಎಸೆದ ವರೆಗೆ ಸಾಕಷ್ಟು ರೋಚಕ ವಿಚಾರಗಳು ನಡೆದವು. ಇದೀಗ ಹೆಲ್ಮೆಟ್ ಎಸೆದ ಘಟನೆಯ ಬಗ್ಗೆ ಮಾತನಾಡಿರುವ ಲಖನೌ ಸೂಪರ್ ಜೇಂಟ್ಸ್ ತಂಡದ ಬೌಲರ್ ಆವೇಶ್ ಖಾನ್ ಕ್ಷಮೆಯಾಚಿಸಿದ್ದಾರೆ. ಅಂದು ನಾನು ಆರೀತಿ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ಅಂದು ಆ ಘಟನೆ ನಡೆದ ಬಳಿಕ ಜನರು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ದೂಷಿಸುತ್ತಿದ್ದರು. ನಾನು ಆರೀತಿ ಮಾಡಬಾರದಿತ್ತು ಎಂದು ನಂತರ ಅರಿತುಕೊಂಡೆ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ಇದರಿಂದ ನನಗೆ ಈಗ ಬೇಸರವಾಗಿದೆ ಎಂದು ಆವೇಶ್ ಖಾನ್ ಹೇಳಿದ್ದಾರೆ. ಇದೇವೇಳೆ ಅವೇಶ್ ಖಾನ್ ಅವರ ಹಿಂದಿನ ಎರಡು ಸೀಸನ್ಗಳಿಗೆ ಹೋಲಿಸಿದರೆ, 2023 ರ ಐಪಿಎಲ್ ಸೀಸನ್ ನನಗೆ ಅಷ್ಟು ಯಶಸ್ವಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಋತುವಿನಲ್ಲಿ ಆವೇಶ್ 9 ಪಂದ್ಯಗಳಿಂದ ಕೇವಲ 8 ವಿಕೆಟ್ಗಳನ್ನಷ್ಟೆ ಪಡೆದುಕೊಂಡಿದ್ದರು.
ನನ್ನ ಹಿಂದಿನ ಎರಡು ಐಪಿಎಲ್ ಸೀಸನ್ಗಳನ್ನು ನೀವು ಹೋಲಿಕೆ ಮಾಡಿದರೆ, ಅದು ನಾನು ಬಯಸಿದ ರೀತಿಯಲ್ಲಿ ನಡೆಯಿತು. ಆದರೆ ಈ ಋತುವು ನಾನು ಅಂದುಕೊಂಡಂತೆ ನಡೆಯಲಿಲ್ಲ. ಹೀಗಿದ್ದರೂ 10 ಕ್ಕಿಂತ ಕಡಿಮೆ ರನ್ರೇಟ್ ಬರುವ ರೀತಿ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಏಪ್ರಿಲ್ 10 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ರೋಚಕತೆಯಿಂದ ಕೂಡಿತ್ತು. ಇದರಲ್ಲಿ ಎಲ್ಎಸ್ಜಿ 1 ವಿಕೆಟ್ಗಳ ಜಯ ಸಾಧಿಸಿತ್ತು.