ವಿರೋಧ ಪಕ್ಷಗಳ ಐಎನ್ಡಿಐಎ ಮೈತ್ರಿಕೂಟ ಬಣದ ಮಾಧ್ಯಮ ಸಮಿತಿಯು 14 ಮಂದಿ ಟಿವಿ ನಿರೂಪಕರು ಮತ್ತು ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಪಟ್ಟಿ ಬಿಡುಗಡೆ ಮಾಡಿರುವ ವಿಚಾರ, ಮೈತ್ರಿಕೂಟದಲ್ಲಿ ಭಿನ್ನರಾಗಕ್ಕೆ ಕಾರಣವಾಗಿದೆ. ಈ ವಿಷಯದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ತಾವು ಪತ್ರಕರ್ತರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಜೆಡಿಯು ಮುಖ್ಯಸ್ಥ ನಿತೀಶ್ ಅವರ ಹೇಳಿಕೆ, ವಿಪಕ್ಷ ಬಣದಲ್ಲಿ ಒಮ್ಮತ ಇರುವ ಬಗ್ಗೆ ಅನುಮಾನ ಮೂಡಿಸಿದೆ.
ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಹಾಗೂ ವಿರೋಧ ಪಕ್ಷಗಳನ್ನು ಟೀಕಿಸುವ’ ಮಾಧ್ಯಮಗಳಲ್ಲಿನ ಟಿವಿ ನಿರೂಪಕರನ್ನು ಬಹಿಷ್ಕರಿಸುವುದಾಗಿ ಐಎನ್ಡಿಐಎ ಮೈತ್ರಿಕೂಟವು ಪಟ್ಟಿ ಬಿಡುಗಡೆ ಮಾಡಿತ್ತು. ಈ ಪ್ರಕಟಣೆ ಕುರಿತು ಕೇಳಿದ ಪ್ರಶ್ನೆಗೆ ನಿತೀಶ್, “ನನಗೆ ಅದರ ಬಗ್ಗೆ ಯಾವ ತಿಳಿವಳಿಕೆಯೂ ಇಲ್ಲ. ನಾನು ಪತ್ರಕರ್ತರನ್ನು ಬೆಂಬಲಿಸುತ್ತೇನೆ”, ಎಂದು ಹೇಳಿದರು.
“ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ ದೊರಕಿದಾಗ, ಪತ್ರಕರ್ತರು ತಮಗೆ ಇಷ್ಟವಾಗಿದ್ದನ್ನು ಬರೆಯುತ್ತಾರೆ. ಅವರನ್ನು ನಿಯಂತ್ರಿಸಲಾಗುತ್ತದೆಯೇ? ನಾನು ಎಂದಾದರೂ ಅದನ್ನು ಮಾಡಿದ್ದೇನೆಯೇ? ಅವರಿಗೆ ಹಕ್ಕುಗಳಿವೆ, ನಾನು ಯಾರ ವಿರುದ್ಧವೂ ಅಲ್ಲ” ಎಂದು ಪ್ರತಿಕ್ರಿಯೆ ನೀಡಿದರು. “ಪ್ರಸ್ತುತ ಕೇಂದ್ರದಲ್ಲಿರುವ ವ್ಯಕ್ತಿಗಳು ಕೆಲವರನ್ನು ನಿಯಂತ್ರಿಸುತ್ತಿದ್ದಾರೆ. ನಮ್ಮ ಜತೆ (ಐಎನ್ಡಿಐಎ ಬಣ) ಇರುವವರು ಏನೋ ನಡೆಯುತ್ತಿದೆ ಎಂದು ಭಾವಿಸಿರಬಹುದು. ಆದರೆ ನಾನು ಯಾರ ವಿರುದ್ಧ ಕೂಡ ಇಲ್ಲ” ಎಂದು ಬಿಹಾರ ಸಿಎಂ ತಿಳಿಸಿದರು.