ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಆರ್ಯ ಈಡಿಗ ಭವನದಲ್ಲಿ ಇಂದು ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ‘ಕೃತಜ್ಞತಾ ಸಭೆ’ಯನ್ನು ಹಮ್ಮಿಕೊಳ್ಳಲಾಗಿತ್ತು.
ಈ , ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಆಯ್ಕೆಗೆ ಬೆಲೆ ಕೊಡಬೇಕು. ಅವರ ಅಭಿಪ್ರಾಯವನ್ನು ಗೌರವಿಸಬೇಕು. ಆದ್ದರಿಂದ, ಈ ಸೋಲು ಮುಂದಿನ ಬದಲಾವಣೆಗೆ ಸ್ಪೂರ್ತಿ ಆಗಲಿದೆ.
ಮತ ನೀಡಿ ಹರಸಿದ ಎಲ್ಲಾ ಮತದಾರರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ಆಂತರಿಕವಾಗಿ ಸೋತಿದೆ ಎಂದರು.ಗೀತಾ ಶಿವರಾಜಕುಮಾರ ಅವರು ಕ್ಷೇತ್ರದಲ್ಲಿ ಸೋತಿರಬಹುದು. ಆದರೆ, ಜನರ ಮನಸ್ಸು ಗೆದ್ದಿದ್ದಾರೆ. ಚುನಾವಣೆಯಲ್ಲಿ ೫.೩೦ ಲಕ್ಷ ಮತ ಪಡೆಯುವ ಮೂಲಕ ಕ್ಷೇತ್ರದ ಮತದಾರರ ಹೃದಯ ಗೆದ್ದಿದ್ದೇವೆ. ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬಿ ಬಡವರ ಹಸಿವು ನೀಗಿಸುತ್ತಿದೆ. ಆದರೆ, ಜನರು ಗೀತಕ್ಕ ಅವರ ಕೈ ಹಿಡಿಯಲಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.