ಬೆಂಗಳೂರು: ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಮತದಾನ ಮುಗಿದು ಚುನಾವಣೋತ್ತರ ಸಮೀಕ್ಷೆಗಳು (Exit Polls) ಬಿಡುಗಡೆಯಾಗಿವೆ. ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ (Congress) ಮುನ್ನಡೆ ಸಿಕ್ಕಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ಟ್ವೀಟ್ನಲ್ಲೇನಿದೆ?
ನಾನು ಕಾಂಗ್ರೆಸ್ ನಾಯಕರು ಹಾಗೂ ಸಿಂಹದಂತಿರುವ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರು ಘನತೆಯುತ ಮತ್ತು ಉತ್ತಮವಾದ ಪ್ರಚಾರ ಮಾಡಿದ್ದಾರೆ. ಪ್ರಗತಿಪರ ಭವಿಷ್ಯಕ್ಕಾಗಿ ಮತ ಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಕರ್ನಾಟಕದ ಜನತೆಗೆ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಮುನ್ನಡೆ ಕಂಡುಬಂದಿದ್ದರೂ ಈ ಬಾರಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
2018ರ ಚುನಾವಣೆಯಲ್ಲಿ 72.10% ಮತದಾನ ನಡೆದಿದ್ದರೆ ಈ ಬಾರಿ ಹೆಚ್ಚಿನ ಮತದಾನ ನಡೆಯುವ ಸಾಧ್ಯತೆಯಿದೆ. ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದ್ದು ಕಾಂಗ್ರೆಸ್, ಬಿಜೆಪಿ ಮಧ್ಯೆ ಭಾರೀ ಸ್ಪರ್ಧೆ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಒಂದು ವೇಳೆ ಮತ ಪ್ರಮಾಣ ಜಾಸ್ತಿಯಾದರೆ ಒಂದು ಪಕ್ಷಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ಹೀಗಾಗಿ ಯಾರಿಗೆ ಹೊಡೆತ ನೀಡುತ್ತೆ ಎನ್ನುವುದು ಮೇ 13 ರಂದು ತಿಳಿಯಲಿದೆ.