ಕೊನೆಗೂ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಇದೇ ಸೆ.28ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಇರಲಿದೆ. ಅಂದ ಹಾಗೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿತ್ತು. ಆ ನಂತರ ಬಿಗ್ ಬಾಸ್ ಪ್ರೋಮೋ ಮೂಲಕ ಎಲ್ಲಾ ವದಂತಿಗಳಿಗೂ ಉತ್ತರ ಸಿಕ್ಕಿತ್ತು. ಆದರೆ ಅಸಲಿಗೆ ಏನಾಗಿತ್ತು ಎಂದು ಸುದೀಪ್ ತಿಳಿಸಿದ್ದಾರೆ. ಈ ಸೀಸನ್ ನಿರೂಪಣೆ ಮಾಡೋದು ಬೇಡ ಅಂತ ಯೋಚನೆ ಮಾಡಿದ್ದು ನಿಜ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ `ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ಬೇರೆಯವರು ನಿರೂಪಣೆ ಮಾಡಲಿ ಎಂದೇ ನಿರ್ಧರಿಸಿದ್ದೆ. ಹಾಗಂತ ವಾಹಿನಿಯ ಜೊತೆ ಒಡನಾಟ ಚೆನ್ನಾಗಿರಲಿಲ್ಲ ಅಂತ ಅಲ್ಲ. ತಂಡ ನನ್ನನ್ನು ತಂಬಾ ಚೆನ್ನಾಗಿ ನೋಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರತಿ ಬಾರಿ ಬಿಗ್ ಬಾಸ್ ಶುರು ಆಗ್ತಿದ್ದಂತೆ ನನ್ನ ಲೈಫ್ ಮ್ಯೂಟ್ ಆಗುತ್ತದೆ. 4 ದಿನ ಹೊರಗೆ ಹೋಗಬಹುದು ಅಷ್ಟೇ, ಮತ್ತೆ ಶುಕ್ರವಾರ ಬರಬೇಕಾಗುತ್ತದೆ. ಹಾಗಾಗಿ 10 ವರ್ಷ ಆಯ್ತು ಬೇರೆಯವರು ಮಾಡಲಿ ಅಂತ ಇತ್ತು. ಎಲ್ಲರೂ ನನ್ನ ಒಪ್ಪಿಸೋಕೆ ವಾಹಿನಿ ತಂಡ ಮನೆಗೆ ಬಂದಿತ್ತು. ಬಿಗ್ ಬಾಸ್ ಅನ್ನೋದು ಬ್ಯೂಟಿಫುಲ್ ವೇದಿಕೆ, ಹಾಗಾಗಿ ಆ ನಂತರ ನಿರೂಪಣೆ ಮಾಡಲು ಒಪ್ಪಿಕೊಂಡಿರೋದಾಗಿ ಸುದೀಪ್ ತಿಳಿಸಿದ್ದಾರೆ.
90% ಜನ ಈ ಶೋ ನೋಡ್ತಾರೆ, ಹಾಗಾಗಿ ‘ಬಿಗ್ ಬಾಸ್’ ಕಾರ್ಯಕ್ರಮ ಮಾಡಲು ಇದು ಒಂದು ಕಾರಣ. ಸಿನಿಮಾದ ಜೊತೆ ಈ ಶೋನಿಂದ ತುಂಬಾ ಪ್ರೀತಿ ಸಿಕ್ಕಿದೆ ಎಂದಿದ್ದಾರೆ ಸುದೀಪ್. ಇನ್ನೂ 10 ವರ್ಷದಲ್ಲಿ ರೀಟೇಕ್ ತಗೆದುಕೊಂಡಿಲ್ಲ. ಮನೆಗೆ ಹೋದ್ಮೇಲೆ ನೋ ರೀಟೇಕ್ ಎಂದಿದ್ದಾರೆ. ಶೋ ಮಾಡುವಾಗ ಬಹಳ ಹೊತ್ತು ನಿಂತರೆ ಕಾಲು ನೋವು ಬರುತ್ತದೆ. ಎಲ್ಲವನ್ನೂ ನಿಭಾಯಿಸಿಕೊಂಡು ಮಾಡುತ್ತಿದ್ದೆ ಎಂದು ಸುದೀಪ್ ಹೇಳಿದ್ದಾರೆ.